ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಟ್ರೇಲರ್ ಬಿಡಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ವ್ಯಾಪಕ ವೀಕ್ಷಕರ ಆಕರ್ಷಿಸುತ್ತಿದೆ.
ಕಾಳ ಚಿತ್ರತಂಡ ಇಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 3 ಲಕ್ಷಕ್ಕೂ ಅಧಿಕ ಜನ ಈ ಟ್ರೇಲರ್ ವೀಕ್ಷಣೆ ಮಾಡಿದ್ದಾರೆ. ಚಿತ್ರದಲ್ಲಿ ಹಿಂದುಳಿದವರ ವರ್ಗದ ನಾಯಕನಾಗಿ ರಜನಿಕಾಂತ್ ಮಿಂಚಿದ್ದು, ನಾನಾ ಪಾಟೇಕರ್ ಪ್ರಮುಖಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರರಂಗದಿಂದ ರಾಜಕೀಯದತ್ತ ಮುಖ ಮಾಡಿರುವ ರಜನಿಕಾಂತ್, ಕಾಳ ಚಿತ್ರದ ಮೂಲಕ ಮತ್ತೆ ಜನರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ರಾಜಕೀಯದ ಎಳೆ ಇದ್ದು, ರಗಡ್ ಲುಕ್ ನಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಕೇವಲ ಒಂದೂವರೆ ನಿಮಿಷದ ಟ್ರೇಲರ್ ನಲ್ಲೇ ನಿರ್ದೇಶಕ ಪಾ.ರಂಜಿತ್ ರಜನಿಕಾಂತ್ ಅವರ ಪಾತ್ರವನ್ನು ಸೂಕ್ಷ್ಮವಾಗಿ ತೋರಿಸಿಕೊಟ್ಟಿದ್ದು, ಚಿತ್ರದ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಇನ್ನು ಚಿತ್ರದಲ್ಲಿ ಹುಮಾ ಖುರೇಷಿ, ಈಶ್ವರಿ ರಾವ್ ಮತ್ತು ಖ್ಯಾತ ನಟ, ನಿರ್ದೇಶಕ ಸಮುದ್ರ ಕಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.