ಚೆನ್ನೈ: ನನ್ನ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಏಕೆ ನಿರ್ಬಂಧ ಹೇರಲಾಗಿದೆ ಎಂದು ಕಾರಣ ತಿಳಿದಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ನ ಭಾಗವಾಗಿದ್ದು ಈ ವಿಷಯದಲ್ಲಿ ಅವರು ಮಧ್ಯೆ ಪ್ರವೇಶಿಸಿ ಸೌಹಾರ್ದಯುತ ಪರಿಹಾರಕ್ಕೆ ಬರುತ್ತಾರೆ ಎಂದು ಭಾವಿಸುತ್ತೇನೆ ಎಂದು ನಟ ರಜನಿಕಾಂತ್ ಹೇಳಿದ್ದಾರೆ.
ರಜನಿಕಾಂತ್ ಅವರ ಮುಂಬರುವ ಚಿತ್ರ ಕಾಲಾವನ್ನು ಕರ್ನಾಟಕದಲ್ಲಿ ಬಿಡುಗಡೆಗೆ ನಿಷೇಧ ಹೇರಿ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ನಿಷೇಧ ಹೇರಿದೆ. ಈ ಬಗ್ಗೆ ರಜನಿಕಾಂತ್ ಪ್ರತಿಕ್ರಿಯಿಸಿದ್ದು, ಕರ್ನಾಟಕದಲ್ಲಿ ಕೂಡ ಚಿತ್ರ ಬಿಡುಗಡೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಮಾರು 10 ಕನ್ನಡಪರ ಸಂಘಟನೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿ ಕಾಲಾ ಚಿತ್ರ ಬಿಡುಗಡೆ ಮಾಡದಂತೆ ಕೋರಿದ್ದವು. ಕಾವೇರಿ ನೀರಿನ ವಿವಾದ ಕುರಿತು ರಜನಿಕಾಂತ್ ಹೇಳಿಕೆಯಿಂದ ಬೇಸರಗೊಂಡು ಚಿತ್ರ ಬಿಡುಗಡೆಗೆ ನಿಷೇಧ ಹೇರುವಂತೆ ಈ ಸಂಘಟನೆಗಳು ಒತ್ತಾಯಿಸಿದ್ದವು.
ರಜನಿಕಾಂತ್ ಅವರ ಈ ಹಿಂದಿನ ಚಿತ್ರ ಕಬಾಲಿ ಕರ್ನಾಟಕದಲ್ಲಿ ಸುಮಾರು 30 ಕೋಟಿ ರೂಪಾಯಿ ಗಳಿಸಿತ್ತು. ಕಾಲಾ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗದಿದ್ದರೆ ಚಿತ್ರದ ಒಟ್ಟು ಗಳಿಕೆ ಮೇಲೆ ಪರಿಣಾಮ ಬೀರಲಿದೆ.
ಪಾ ರಂಜಿತ್ ನಿರ್ದೇಶನದಲ್ಲಿ ಕಾಲಾ ಚಿತ್ರ ಮೂಡಿಬಂದಿದೆ.