ಸಿನಿಮಾ ಸುದ್ದಿ

ಪೊಲೀಸರು ರಾತ್ರಿ ವೇಳೆ ನನ್ನ ಮನೆಗೆ ಬಂದು ಹಲವು ಬಾರಿ ಬಾಗಿಲು ಬಡಿದರು: 'ಸರ್ಕಾರ್' ನಿರ್ದೇಶಕ ಮುರುಗದಾಸ್

Sumana Upadhyaya

ಚೆನ್ನೈ: ಸರ್ಕಾರ್ ಚಿತ್ರ ನಿರ್ದೇಶಕ ಎ ಆರ್ ಮುರುಗದಾಸ್ ಅವರನ್ನು ಬಂಧಿಸಲು ಅವರ ನಿವಾಸಕ್ಕೆ ತಮಿಳುನಾಡು ಪೊಲೀಸರು ತೆರಳಿದ್ದಾರೆ ಎಂದು  ಸ್ವತಃ ನಿರ್ದೇಶಕ ಎ ಆರ್ ಮುರುಗದಾಸ್ ಮತ್ತು ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಟ್ವೀಟ್ ಮಾಡಿರುವುದು ಭಾರೀ ಸಂಚಲನವುಂಟುಮಾಡಿದೆ.

ಎ ಆರ್ ಮುರುಗದಾಸ್ ಅವರನ್ನು ಬಂಧಿಸಲು ಪೊಲೀಸರು ನಿರ್ದೇಶಕರ ಮನೆಗೆ ತೆರಳಿದ್ದಾರೆ ಎಂದು ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿದೆ. ಈ ಸುದ್ದಿ ತಮಿಳುನಾಡಿನ ಚಿತ್ರೋದ್ಯಮ ಮತ್ತು ನಿರ್ದೇಶಕರ ಅಭಿಮಾನಿಗಳಿಗೆ ಆಘಾತವುಂಟುಮಾಡಿದೆ.
ಎ ಆರ್ ಮುರುಗದಾಸ್ ಮನೆಯಲ್ಲಿ ಇಲ್ಲದಿದ್ದರಿಂದ ಪೊಲೀಸರು ಅವರ ನಿವಾಸದಿಂದ ಬರಿಗೈಯಲ್ಲಿ ತೆರಳಿದ್ದಾರೆ. ಆದರೆ ಅವರ ಇರುವಿಕೆ ಬಗ್ಗೆ ಅವರ ಕುಟುಂಬದವರನ್ನು ವಿಚಾರಿಸಿದ್ದಾರೆ ಎಂದು ಕೂಡ ಮತ್ತೊಂದು ಟ್ವೀಟ್ ಮಾಡಿದೆ.

ಇನ್ನು ನಿರ್ದೇಶಕ ಎ ಆರ್ ಮುರುಗದಾಸ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ನಿವಾಸಕ್ಕೆ ತಮಿಳುನಾಡು ಪೊಲೀಸರು ಮಧ್ಯರಾತ್ರಿ ವೇಳೆ ಬಂದು ಹಲವು ಬಾರಿ ಬಾಗಿಲು ಬಡಿದರು, ಆದರೆ ನಾನು ಮನೆಯಲ್ಲಿ ಇಲ್ಲದ್ದರಿಂದ ಅವರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಮುರುಗದಾಸ್ ಮನೆಗೆ ಏಕೆ ಹೋದರು, ಎಷ್ಟು ಹೊತ್ತಿಗೆ ಹೋದರು ಎಂಬ ಬಗ್ಗೆ ತಮಿಳುನಾಡು ಪೊಲೀಸರು ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಹಲವು ಅಡೆತಡೆಗಳ ನಂತರ ವಿಜಯ್ ನಟನೆಯ ಸರ್ಕಾರ್ ಚಿತ್ರ ದೀಪಾವಳಿ ಸಂದರ್ಭದಲ್ಲಿ ನಿನ್ನೆ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯ ನಂತರ ಹಲವು ಎಐಎಡಿಎಂಕೆ ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳು ಚಿತ್ರದಲ್ಲಿರುವ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಅಲ್ಲದೆ ಪಕ್ಷದ ಪದಾಧಿಕಾರಿಗಳು ನಿನ್ನೆಯಿಂದ ತಮಿಳುನಾಡಿನಲ್ಲಿ ಸರ್ಕಾರ್ ಚಿತ್ರ ಪ್ರದರ್ಶನವಾಗುತ್ತಿರುವ ಹಲವು ಥಿಯೇಟರ್ ಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಸಿನಿಮಾ ಥಿಯೇಟರ್ ಗಳ ಮುಂದೆ ವಿಜಯ್ ಕಟೌಟ್, ಬ್ಯಾನರ್ ಗಳನ್ನು ಹರಿದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವಿವಾದದ ಹಿನ್ನಲೆಯಲ್ಲಿ ಚಿತ್ರತಂಡ ಸರ್ಕಾರ್ ಚಿತ್ರದಲ್ಲಿರುವ ಕೆಲವು ದೃಶ್ಯಗಳನ್ನು ಮತ್ತು ಸಂಭಾಷಣೆಗಳನ್ನು ತೆಗೆಯಲು ನಿರ್ಧರಿಸಿದೆ ಎನ್ನಲಾಗಿದೆ.ಸಮಾಜದಲ್ಲಿ ಹಿಂಸೆ, ಗಲಭೆಗೆ ಕಾರಣವಾಗುವ ಅಂಶಗಳಿವೆ, ಇದು ಭಯೋತ್ಪಾದನೆ ಕೃತ್ಯಕ್ಕಿಂತ ಕಡಿಮೆಯೇನಲ್ಲ, ನಾವು ನಟ ಮತ್ತು ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಾನೂನು ಸಚಿವ ಸಿ ವಿ ಶಣ್ಮುಗಮ್ ತಿಳಿಸಿದ್ದರು.

ಇಷ್ಟೆಲ್ಲಾ ವಾದ, ವಿವಾದಗಳು ನಡೆದರೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವ ರಾಜಕೀಯ ಕಥೆಯಾಧರಿಸಿದ ಚಿತ್ರ ಸರ್ಕಾರ್ ಬಿಡುಗಡೆಯಾದ ಎರಡೇ ದಿನಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ.

SCROLL FOR NEXT