ಬೆಂಗಳೂರು: ಆಪರೇಷನ್ ಅಲಮೇಲಮ್ಮ ಚಿತ್ರದ ಖ್ಯಾತಿಯ ಮನಿಷ್ ರಿಷಿ ತನ್ನ
ವಿಕಲಚೇತನ ಚಿಕ್ಕಮ್ಮನ ಕುತ್ತಿಗೆ ಹಿಸುಕಿ, ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ,
ಎರಡನೇ ಸಿನಿಮಾವಾಗಿ 'ಕವಲುದಾರಿ' ಎಂಬ ಬಹುನಿರೀಕ್ಷಿತ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ನಟ ರಿಷಿ ಸ್ಯಾಂಡಲ್ವುಡ್ನಲ್ಲಿ ನೆಲೆಯೂರುವ ಭರವಸೆ ಮೂಡಿಸಿದ್ದರು.
ರಿಷಿ, ಚಿಕ್ಕಮ್ಮ ಶಾಲಿನಿ ಗುರುಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.ಬಸವೇಶ್ವರನಗರದಲ್ಲಿರುವ ತಂದೆ ಮನೆಗೆ ತಂದೆಯನ್ನು ನೋಡಲು ತೆರಳಿದ್ದಾಗ ಹಲ್ಲೆ ನಡೆಸಲಾಗಿದೆ.
ನಟ ರಿಷಿ ತಮ್ಮ ಅಮ್ಮ ಅನಲ ಅವರ ತಂದೆಯ ಮನೆ ಅಂದರೆ ರಿಷಿಯ ತಾತನ ಮನೆಯಲ್ಲಿಯೇ ವಾಸವಾಗಿದ್ದಾರೆ. ಅವರ ಜೊತೆಗೆ ರಿಷಿಯ ಅಪ್ಪ ನಾಗರಾಜು ಕೂಡ ಅಲ್ಲಿಯೇ ಇದ್ದಾರೆ. ಅನಲ ಅವರ ತಂಗಿ ಶಾಲಿನಿ ಗುರುಮೂರ್ತಿ ವಿಕಲಚೇತನರಾಗಿದ್ದು, ನಿನ್ನೆ ತಮ್ಮ ತಂದೆಯನ್ನು ನೋಡಲು ಬಸವೇಶ್ವರದಲ್ಲಿರುವ ಮನೆಗೆ ಬಂದಿದ್ದಾರೆ. ಆದರೆ, ಆಕೆಯನ್ನು ಒಳಗೆ ಬರಲು ಬಿಡದ ರಿಷಿ ಮತ್ತವರ ತಂದೆ-ತಾಯಿ, ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕಿ ಒಳಗೆ ಬಾ ಎಂದು ಹೆದರಿಸಿದ್ದಾರೆ.
ತಮ್ಮ ತಾತನ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ರಿಷಿ ತನ್ನ ಚಿಕ್ಕಮ್ಮನಿಗೆ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸ್ವತಃ ಶಾಲಿನಿ ಗುರುಮೂರ್ತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಿ ಹಾಗೂ ಅವರ ಅಪ್ಪ-ಅಮ್ಮನ ವಿರುದ್ಧ ಬಸವೇಶ್ವರನಗರದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.