ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತೊಮ್ಮೆ ಕನ್ನಡ ಹಾಗೂ ಕನ್ನಡಿಗರನ್ನು ತಿರಸ್ಕಾರದಿಂದ ನೋಡಿರುವುದು ಮತ್ತೊಮ್ಮೆ ಸಾಬೀತಾಗಿದೆ.
ವಿಜಯದಶಮಿಗೆ ಶುಭಾಶಯ ಕೋರಿರುವ ಮಹೇಶ್ ಬಾಬು ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ. ಆದರೆ ಕನ್ನಡ ಭಾಷೆಯಲ್ಲಿ ಶುಭಕೋರಲು ಮರೆತು ಬಿಟ್ಟಿದ್ದಾರೆ. ಇದರಿಂದ ಕನ್ನಡಿಗರು ಕೋಪಗೊಂಡು ಮಹೇಶ್ ಬಾಬು ವಿರುದ್ಧ ಕಿಡಿಕಾರಿದ್ದಾರೆ.
ತೆಲುಗು ಬಿಟ್ಟರೆ ಮಹೇಶ್ ಬಾಬುಗೆ ದೊಡ್ಡ ಮಾರ್ಕೆಟ್ ಇರುವುದು ಕನ್ನಡದಲ್ಲೇ. ಆದರೆ ಕನ್ನಡವನ್ನೇ ಪದೇ ಪದೇ ಕಡೆಗಣಿಸುತ್ತಿದ್ದಾರೆ ಎಂದು ಕರ್ನಾಟಕದಲ್ಲಿರುವ ಮಹೇಶ್ ಬಾಬು ಅಭಿಮಾನಿಗಳು ಕೋಪಗೊಂಡಿದ್ದಾರೆ. ನಿಮಗೆಲ್ಲಾ ಕನಿಷ್ಠ ಕಾಳಜಿಯೂ ಇಲ್ಲ, ನಿಮ್ಮ ಸಿನಿಮಾ ನೋಡದೇ ಇದ್ದರೆ ಆಗ ನೀವಾಗಿಯೇ ದಾರಿಗೆ ಬರುತ್ತೀರಿ ಎಂದು ತೆಲುಗು ಸ್ಟಾರ್ ನಟನಿಗೆ ಕನ್ನಡಿಗರು ಬೆಂಡೆತ್ತಿದ್ದಾರೆ.
ಈ ಹಿಂದೆ ಕೂಡ ಬ್ರಹ್ಮೋತ್ಸವಂ ಸಿನಿಮಾ ವೇಳೆಯಲ್ಲೂ ಮಹೇಶ್ ಬಾಬು ಅವರು ಕನ್ನಡ ಭಾಷೆಯಲ್ಲಿ ಬಿಟ್ಟು ಬೇರೆ ಭಾಷೆಗಳಲ್ಲಿ ಕೃತಜ್ಞತೆ ತಿಳಿಸಿದ್ದರು. ಸದ್ಯ ಇದರಿಂದ ಕುಪಿತರಾಗಿರುವ ಕನ್ನಡಿಗರು ಮಹೇಶ್ ಬಾಬು ಮುಂದಿನ ಸಿನಿಮಾ ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.