ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ ಮಹಿಳೆ
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧದ ನಟಿ ಶೃತಿ ಹರಿಹರನ್ ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಪಟ್ಟಿಗೆ ಇದೀಗ ಮತ್ತೊರ್ವ ಮಹಿಳೆ ಸೇರ್ಪಡೆಯಾಗಿದ್ದಾರೆ.
ಮಾಧ್ಯಮವೊಂದು ವರದಿ ಮಾಡಿರುವಂತೆ, ಬಹುಭಾಷಾ ನಟ ಅರ್ಜುನ್ ಸರ್ಜಾ ಚಿತ್ರವೊಂದರ ಚಿತ್ರೀಕರಣದ ವೇಳೆ ತಮ್ಮ ಹೊಟೆಲ್ ರೂಂ ನಂಬರ್ ನೀಡಿ ರೂಂಗೆ ಬರುವಂಕೆ ಆಹ್ವಾನಿಸಿದ್ದರು ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ 15 ವರ್ಷಗಳ ಹಿಂದೆ ನಡೆದಿದ್ದು, ಗೃಹಿಣಿ ಈಗ ಮೀಟೂ ಅಭಿಯಾನದ ಮೂಲಕ ಬಹಿರಂಗಪಡಿಸಿದ್ದಾರೆ.
ಮೈಸೂರಿನಲ್ಲಿ ತೆಲುಗಿನ 'ಅರ್ಜುನುಡು' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಮಹಿಳೆ ಆರೋಪ ಮಾಡಿದ್ದು, 'ಗೃಹಿಣಿಯಾದ ನಾನು ಮೂರು ದಿನ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದೆ. ನನ್ನ ಜೊತೆ ಇಪ್ಪತ್ತು ವಿದ್ಯಾರ್ಥಿನಿಯರು ಪಾರ್ಟ್ ಟೈಂ ಕೆಲಸದಲ್ಲಿ ಶೂಟಿಂಗ್ ಸೀನ್ ನಲ್ಲಿ ಪಾಲ್ಗೊಂಡಿದ್ದರು. ಸ್ಟೂಡೆಂಟ್ಸ್ ಕ್ರೌಡ್ ಸೀನ್ ನಲ್ಲಿ ಭಾಗವಹಿಸುವಾಗ ಅರ್ಜುನ್ ನಮ್ಮೊಂದಿಗೆ ಅನುಚಿತ ವರ್ತನೆ ಮಾಡಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ನಮ್ಮ ಅಷ್ಟು ವಿದ್ಯಾರ್ಥಿನಿಯರ ನಂಬರ್ ಕೇಳಿದ್ದರು. ಅಷ್ಟೇ ಅಲ್ಲದೇ ಅವರ ರೂಂ ನಂಬರ್ ಕೊಟ್ಟು, ರೂಮಿಗೆ ಬನ್ನಿ, ರೆಸಾರ್ಟ್ ಇದೆ ನನ್ನದು ಅಂತಾ ಕರೆದಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.
'ನನ್ನ ಅನೇಕ ಸ್ನೇಹಿತೆಯರು ಚಾನ್ಸ್ ಗಾಗಿ ಅರ್ಜುನ್ ಸರ್ಜಾ ರೂಮಿಗೆ ಹೋಗಿದ್ದರು. ಅಲ್ಲಿ ಅವರ ಜೊತೆ ಅರ್ಜುನ್ ಸರ್ಜಾ ಮಿಸ್ ಬಿಹೇವ್ ಮಾಡಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ಕೂಡ ಈ ಸಿನಿಮಾದಲ್ಲಿ ಇದ್ದರು. ಅರ್ಜುನ್ ಸರ್ಜಾ ನಮ್ಮ ಜೊತೆ ಮಾತನಾಡುವ ಅವಶ್ಯಕತೆ ಇಲ್ಲದೇ ಇದ್ದರೂ ನಮ್ಮ ತಂಡದ ಲೀಡರ್ ಜೊತೆ ಕೋ ಆರ್ಡಿನೇಟ್ ಮಾಡಿ, ಅವರಿಗೆ ಒಂದಿಷ್ಟು ದುಡ್ಡು ಕೊಟ್ಟು ನಮ್ಮ ತಂಡದ ಹುಡುಗಿಯನ್ನು ರೂಮಿಗೆ ಕರೆಸಿಕೊಂಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.