ಬೆಂಗಳೂರು: ಮೀ ಚಳವಳಿಯಲ್ಲಿ ನಟಿ ಶ್ರುತಿ ಹರಿಹರನ್ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಅರ್ಜುನ್ ಸರ್ಜಾ ಪತ್ನಿ ಆಶಾರಾಣಿ ಮತ್ತು ಪುತ್ರಿ ಐಶ್ವರ್ಯಾ ಸರ್ಜಾ ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರುತಿ ಹರಿಹರನ್ ಮಾಡಿರುವ ಆರೋಪದಲ್ಲಿ ತಳ ಬುಡ ಇಲ್ಲ. ಅರ್ಜುನ್ ಸರ್ಜಾ ಏನೆಂಬುದು ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಗೆ ಗೊತ್ತು. ಇದು ಮೀಟೂ ಚಳವಳಿಯೇ ಅಲ್ಲ, ಅದರ ಉದ್ದೇಶ ದಾರಿತಪ್ಪುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಶ್ರುತಿ ಹರಿಹರನ್ ಬಗ್ಗೆ ಬಹಳಷ್ಟು ಮಾಹಿತಿಗಳು ನಮ್ಮ ಬಳಿ ಇವೆ. ಈಕೆ ದುಡ್ಡಿಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿದೆ. ಈ ವಿಚಾರವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಆಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಹೇಳಿದ್ದಾರೆ.
ಆಕೆ ಸ್ಯಾಂಡಲ್ವುಡ್ನಲ್ಲಿ ಒಳ್ಳೆ ಹೆಸರು ಮಾಡಿದ ನಟಿ. ಘಟನೆ ಆದಾಗ ಏಕೆ ಅಪಸ್ವರ ಎತ್ತಲಿಲ್ಲ, ಅಥವಾ ಆರೋಪ ಮಾಡಲಿಲ್ಲ, ಈಗೇನೋ ಮಿ ಟೂ ಚಳವಳಿ ಬಂದಿದೆ ಎಂದು ನನ್ನ ಪತಿ ವಿರುದ್ಧ ಆರೋಪ ಮಾಡಿದ್ದಾಳೆ. ಈ ಆರೋಪದಿಂದ ನಾವು ಇನ್ನೂ ಮಾನಸಿಕವಾಗಿ ಗಟ್ಟಿಯಾಗಿದ್ದೇವೆ. ಅರ್ಜುನ್ 34 ವರ್ಷದ ಅವರ ವೃತ್ತಿಜೀವನದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲ. ನಮ್ಮ ಮನೆ ಕೆಲಸದವರಿಗೂ ಅವರು ಏನು ಎಂಬುದು ಗೊತ್ತು ಎಂದರು.
ಇನ್ನೂ ಚಿತ್ರದ ಆರಂಭಕ್ಕೂ ಮುಂಚೆ ಸ್ವತಃ ಅರ್ಜುನ್ ಅವರೇ ಚಿತ್ರ ನಿರ್ದೇಶಕ ಅರುಣ್ ವೈದ್ಯನಾಥ್ ಅವರಿಗೆ ಚಿತ್ರದಲ್ಲಿ ಅನವಶ್ಯವಾಗಿ ಇಂಟಿಮೇಟ್ ದೃಶ್ಯಗಳನ್ನು ಸೇರಿಸಿದ್ದೀರ. ಅವುಗಳಿಗೆ ಕತ್ತರಿ ಹಾಕಿ. ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಇವು ಸರಿ ಹೋಗುವುದಿಲ್ಲ. ನನಗೆ ನನ್ನದೇ ಆದ ಅಭಿಮಾನಿ ಬಳಗ ಇದೆ ಎಂದು ಹೇಳಿಕೊಂಡಿದ್ದರು ಎಂದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯ ಸರ್ಜಾ, ಶ್ರುತಿ ಆರೋಪದ ಹಿಂದೆ ಬೇರೆ ಯಾರದೋ ಕೈವಾಡವಿದೆ. ನಾನು ವಿಸ್ಮಯ ಪ್ರೀಮಿಯಂನಲ್ಲಿ ಆಕೆಯನ್ನು ಭೇಟಿಯಾಗಿದ್ದೆ. ಆಗ ನಾನು ನಿಮ್ಮ ತಂದೆಯ ದೊಡ್ಡ ಫ್ಯಾನ್. ಅವರ ಜತೆ ಕೆಲಸ ಮಾಡಿದ್ದು ತುಂಬ ಖುಷಿಯಾಯ್ತು. ಅವರ ಜತೆ ಮತ್ತೆ ನಟಿಸಬೇಕು ಎಂದೂ ಹೇಳಿದ್ದರು. ಆದರೆ ಈಗ ಈ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೈಬರ್ ಕ್ರೈಮ್ ಅವರ ಬಳಿ ವಿಚಾರಿಸಿದಾಗ, ಶ್ರುತಿ ಅವರಿಗೆ ಈ ರೀತಿ ಮಾಡುವುದು ಅಭ್ಯಾಸ ಎಂದು ಹೇಳಿದ್ದಾರೆ. ಅವರ ಬೆನ್ನ ಹಿಂದೆ ಯಾರೋ ಇದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.