ಬೆಂಗಳೂರು: ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಪ್ರಣಯದ ದೃಶ್ಯ ಬೇಡ ಎಂದು ಹೇಳಿದ್ದರು ಎಂದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದಾರೆ.
ನಟಿ ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಶೃತಿ ಹರಿಹರನ್ ಮೀಟೂ ಅಭಿಯಾನದಲ್ಲಿ ಅರ್ಜುನ್ ಸರ್ ಮೇಲೆ ಆರೋಪ ಹೊರಿಸಿದ್ದು ಕೇಳಿ ನನಗೆ ಶಾಕ್ ಆಯ್ತು. ಇಬ್ಬರೂ ನನಗೆ ಒಳ್ಳೆಯ ಸ್ನೇಹಿತರು. ಹಾಗೆಯೇ ಅವರಿಬ್ಬರ ಕುಟುಂಬ ನನಗೆ ಪರಿಚಿತ. ಇನ್ನು ಅರ್ಜುನ್ ಸರ್ಜಾ ಕುರಿತು ಹೇಳುವುದಾದರೆ ಅವರೊಬ್ಬ ಜಂಟಲ್ ಮೆನ್ ಹಾಗೂ ನಟನೆಯಲ್ಲೂ ಸೈ ಅನಿಸಿಕೊಂಡವರು. ಇದು ಶೃತಿ ಹರಿಹರನ್ ಗೂ ಅನ್ವಯಿಸುತ್ತದೆ. ವಿಸ್ಮಯ ಸಿನಿಮಾದ ಆ ಪ್ರಣಯ ದೃಶ್ಯಗಳ ಬಗ್ಗೆ ನಾವೇ ಮೊದಲೇ ಚರ್ಚಿಸಿದ್ದೇವೆ. ಇದರಲ್ಲಿ ಕೆಲವೊಂದಷ್ಟನ್ನು ಬದಲಾಯಿಸಿದ್ದೇವೆ. ಈ ಚಿತ್ರ ಶೂಟ್ ಆಗಿದ್ದು 2 ವರ್ಷದ ಹಿಂದೆ. ಇದರ ಕುರಿತಾಗಿ ಕೆಲವೊಂದು ನನಗೆ ನೆನಪಿಲ್ಲ.
ಈ ಸಿನಿಮಾದ ಕೆಲವೊಂದು ಪ್ರಣಯ ದೃಶ್ಯಗಳನ್ನು ಅರ್ಜುನ್ ಸರ್ ಕಟ್ ಮಾಡುವುದಕ್ಕೆ ಹೇಳಿದ್ದರು. ನನಗೆ ಇಬ್ಬರೂ ಹೆಣ್ಣುಮಕ್ಕಳಿದ್ದಾರೆ. ಹಾಗಾಗಿ ಪ್ರಣಯದ ಕೆಲವೊಂದು ದೃಶ್ಯಗಳು ಬೇಡ ಅದರಲ್ಲಿ ನಟಿಸುವುದಕ್ಕೆ ಮುಜುರವಾಗುತ್ತದೆ ಎಂದು ಕೂಡ ಹೇಳಿದ್ದರು. ವೈಯಕ್ತಿಕವಾಗಿ ಶೃತಿ ಹಾಗೂ ಅರ್ಜುನ್ ನನಗೆ ಒಳ್ಳೆಯ ಸ್ನೇಹಿತರು. ಒಂದು ಒಳ್ಳೆಯ ಉದ್ದೇಶದಿಂದ ತಂಡವಾಗಿ ನಾವೆಲ್ಲರೂ ಸಿನಿಮಾ ಮಾಡಿದ್ದೇವೆ. ಹಾಗೆಯೆ ಸೆಟ್ ನಲ್ಲಿ ಬಹಳ ತಮಾಷೆಯಾಗಿ ಇದ್ದಿದ್ದೇವು ಎಂದು ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದಾರೆ.
#ಮೀಟೂ ಚಳುವಳಿಯು ಎಲ್ಲಾ ಮಹಿಳೆಯರಿಗೆ ಒಂದೊಳ್ಳೆ ಸುರಕ್ಷಿತ ವಾತಾವರಣವನ್ನು ತರಲಿ ಎಂದು ಬಯಸುತ್ತೇನೆ ಎಂದು ವೈದ್ಯನಾಥನ್ ಹೇಳಿದ್ದಾರೆ. ಅಂತೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ದಯವಿಟ್ಟು ನನಗೆ ಕರೆಯಾಗಲಿ ಮೆಸೇಜ್ ಆಗಲಿ ಮಾಡಬೇಡಿ. ಇದರ ಕುರಿತು ನನಗೆ ಮತ್ತೇನು ಹೇಳುವುದಕ್ಕೆ ಇಲ್ಲ ಎಂದು ಅರುಣ್ ಬರೆದುಕೊಂಡಿದ್ದಾರೆ.