ಬೆಂಗಳೂರು: ನಟಿ ಶೃತಿ ಹರಿಹರನ್ ಅವರ #MeToo ಆರೋಪಕ್ಕೆ ಪ್ರತಿಕ್ರಿಯಿಸಿರುವ ನಟಿ ಹರ್ಷಿಕಾ ಪೂಣಚ್ಚ ಅವರು, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಸರಿಯಲ್ಲ ಎಂದು ಹೇಳುವ ಮೂಲಕ ಬಹುಭಾಷಾ ನಟನ ಬೆಂಬಲಕ್ಕೆ ನಿಂತಿದ್ದಾರೆ.
ಇಂದು ಟ್ವೀಟ್ ಮೂಲಕ ನಟ ಅರ್ಜುನ್ ಸರ್ಜಾಗೆ ಬೆಂಬಲ ವ್ಯಕ್ತಪಡಿಸಿರುವ ಹರ್ಷಿಕಾ ಪೂಣಚ್ಚ ಅವರು, ಸದ್ಯದ ಎಲ್ಲ ಬೆಳವಣಿಗೆಗಳನ್ನು ನಾನು ನೋಡುತ್ತಿದ್ದೇನೆ. ನಾನು ಹತ್ತಿರದಿಂದ ನಮ್ಮ ಇಂಡಸ್ಟ್ರಿಯನ್ನು ಗಮನಿಸಿದ್ದೇನೆ. ಇಲ್ಲಿ ಎಲ್ಲರೂ ಎಲ್ಲರಿಗೂ ಗೌರವ ಕೊಡುತ್ತಾರೆ ಎಂದಿದ್ದಾರೆ.
ಪ್ರಚಾರ ಒಳ್ಳೆಯದು, ಆದರೆ ಅದು ಮಿತಿ ಮೀರಿದರೆ ಒಳ್ಳೆಯದಾ? ಪಬ್ಲಿಸಿಟಿ ಅಂದರೆ ಏನು? ಒಬ್ಬ ಮನುಷ್ಯನ ಕುಟುಂಬವನ್ನೇ ನುಚ್ಚುನೂರು ಮಾಡೋದಾ? ಅವರ ಹೆಂಡತಿ, ಮಕ್ಕಳಿಗೆ ಬೇಸರ ಉಂಟು ಮಾಡುವುದಾ? ಚಿತ್ರರಂಗದಲ್ಲಿ 15 ರಿಂದ 20 ವರ್ಷ ಹೋರಾಡಿ ಕಟ್ಟಿಕೊಂಡಿದ್ದ ವ್ಯಕ್ತಿತ್ವವನ್ನು ಹಾಳು ಮಾಡುವುದಾ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಶೃತಿ ಪ್ರಚಾರಕ್ಕಾಗಿ ಅರ್ಜನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.