ಸಂಜನಾ ಗಲ್ರಾನಿ-ರವಿ ಶ್ರೀವತ್ಸ
ಬೆಂಗಳೂರು: ಗಂಡ-ಹೆಂಡತಿ ಚಿತ್ರದಲ್ಲಿ ಒತ್ತಾಯ ಪೂರ್ವಕವಾಗಿ ಹೆಚ್ಚು ಹೆಚ್ಚು ಚುಂಬನದ ದೃಶ್ಯಗಳನ್ನು ಮಾಡಿಸಿದ್ದರೂ ಎಂದು ನಟಿ ಸಂಜನಾ ಗಲ್ರಾನಿ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ತಿರುಗೇಟು ನೀಡಿದ್ದಾರೆ.
ನಟಿ ಸಂಜನಾಳ ಆರೋಪಗಳಿಗೆ ತಕ್ಕ ಉತ್ತರ ನೀಡಿದ ರವಿ ಶ್ರೀವತ್ಸ ಆಕೆಯ ಗೋಮುಖವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಂಜನಾ ಗಂಡ-ಹೆಂಡತಿ ಚಿತ್ರವನ್ನು ಮಾಡುವಾಗ ತನಗೆ 16 ವರ್ಷವಾಗಿತ್ತು. ಹೆದರಿಸಿ, ಬೆದರಿಸಿ ನನ್ನ ಕೈಯಲ್ಲಿ ಚುಂಬನ ದೃಶ್ಯಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆಕೆಯ ಮಾತುಗಳು ಸತ್ಯಕ್ಕೆ ದೂರವಾಗಿವೆ. ಸಂಜನಾ ನನ್ನ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ನಾಲ್ಕೈದು ಚಿತ್ರಗಳಲ್ಲಿ ನಟಿಸಿದ್ದು ಆಕೆಗೆ ಚಿತ್ರರಂಗದ ಆಳ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಂಜನಾಳನ್ನು ಚಿತ್ರಕ್ಕೆ ಆಯ್ಕೆ ಮಾಡಿದ ತಕ್ಷಣ ಆಕೆಗೆ ಹಿಂದಿಯ ಮರ್ಡರ್ ಚಿತ್ರದ ರಿಮೇಕ್ ಚಿತ್ರವಾಗಿದ್ದು ಆ ಚಿತ್ರವನ್ನು ಡಿವಿಡಿ ಪ್ಲೈಯರ್ ನಲ್ಲಿ ನಟಿ ಸಂಜನಾ ನೋಡಿದ್ದರು. ಆಕೆಗೆ ಆಗ ಅನಿಸಲಿಲ್ಲವೇ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಗಳು ಇರುತ್ತದೆ ಎಂದು. ಆಕೆಗೆ ಆಗ ಅವಕಾಶ ಬೇಕಿತ್ತು ಅದಕ್ಕೆ ಸುಮ್ಮನಿದ್ದರು. ಹೀಗ ಮೀ ಟೂ ಅಭಿಯಾನದಿಂದ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಬ್ಯಾಂಕಾಕ್ ನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು. ಅಲ್ಲಿಗೆ ಸಂಜಳಾನ್ನು ಮಾತ್ರ ಕರೆದುಕೊಂಡು ಹೋಗಿರಲಿಲ್ಲ. ಆಕೆಯ ತಾಯಿಯನ್ನು ಕರೆದುಕೊಂಡು ಹೋಗಿದ್ದೇವು. ಚಿತ್ರೀಕರಣದ ಸಮಯದಲ್ಲೂ ಅವರ ತಾಯಿ ಅಲ್ಲೇ ಇದ್ದರು. ನಾವೇನು ಬಲವಂತದ ಚಿತ್ರೀಕರಣ ಮಾಡಿಲ್ಲ ಎಂದು ರವಿ ಶ್ರೀವತ್ಸ ಹೇಳಿದ್ದಾರೆ.
ಗಂಡ ಹೆಂಡತಿ ಚಿತ್ರ ನೋಡಿ ನನ್ನ ತಂದೆ ಅರ್ಧದಲ್ಲೇ ಚಿತ್ರಮಂದಿರದಿಂದ ಹೊರಬಂದರು ಎಂದು ಸಂಜನಾ ಆರೋಪಿಸಿದ್ದಾರೆ. ಇದಕ್ಕೆ ರವಿ ಶ್ರೀವತ್ಸ ಇಲ್ಲಿಯವರೆಗೂ ನನಗೆ ಸಂಜನಾಳ ತಂದೆ ಯಾರೆಂಬುದೇ ಗೊತ್ತಿರಲಿಲ್ಲ. ಚಿತ್ರದ ಚಿತ್ರೀಕರಣ, ಚಿತ್ರದ ಆಡಿಯೋ ಬಿಡುಗಡೆ ವೇಳೆ, ಚಿತ್ರ ಬಿಡುಗಡೆ ಆ ನಂತರ ಚಿತ್ರ ಸೂಪರ್ ಹಿಟ್ ಆದ ನಂತರ ಸಹ ಆಕೆಯ ತಂದೆ ವಿಚಾರ ಎಲ್ಲೂ ಹೇಳಿರಲಿಲ್ಲ. ಆದರೆ ಮೊನ್ನೆ ಆಕೆಯ ಟ್ವೀಟರ್ ನಲ್ಲಿ ಬರೆದುಕೊಂಡು ಅದರಲ್ಲಿ ನನ್ನ ತಂದೆ ಚಿತ್ರ ನೋಡಿ ಬೇಸರಗೊಂಡಿದ್ದಾರೆ ಎಂದು ಬರೆದಿದ್ದಾರೆ. ಆಗ ಇಲ್ಲದ ತಂದೆ ಈಗ ಎಲ್ಲಿಂದ ಬಂದರು ಎಂದು ರವಿ ಪ್ರಶ್ನಿಸಿದ್ದಾರೆ.
ಗಂಡ-ಹೆಂಡತಿ ಚಿತ್ರ ಸೂಪರ್ ಹಿಟ್ ಆದ ನಂತರ ಸಂಜನಾಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ನಂತರ ಆಕೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿ ಚರ್ತುಭಾಷಾ ನಟಿಯಾಗಿ ಗುರುತಿಸಿಕೊಂಡರು. ಆಗ ಬೆಳೆಯಲು ನಮ್ಮ ಚಿತ್ರ ಬೇಕಿತ್ತು. ಈಗ ಪಬ್ಲಿಸಿಟಿಗಾಗಿ ಮೀ ಟೂ ಬೇಕಾಗಿದೆಯಾ ಎಂದು ರವಿ ಶ್ರೀವತ್ಸ ಪ್ರಶ್ನಿಸಿದ್ದಾರೆ.
ಸಂಜನಾಳನ್ನು ಚಿತ್ರಕ್ಕೆ ಆಯ್ಕೆ ಮಾಡುವ ಮೊದಲು ರಕ್ಷಿತಾರನ್ನು ನಾನು ಅಪ್ರೋಚ್ ಮಾಡಿದ್ದೆ, ಆದರೆ ರಕ್ಷಿತಾ ಅವರು ನಯವಾಗಿ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದರು ಎಂದು ಗಂಡ ಹೆಂಡತಿ ಚಿತ್ರ ನಿರ್ದೇಶಕ ರವಿ ಶ್ರೀವತ್ಸ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos