ಬೆಂಗಳೂರು: ಸ್ಯಾಂಡಲ್ ವುಡ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಮೀಟೂ ಅಭಿಯಾನ ಮತ್ತೊಂದು ಹಂತ ತಲುಪಿದ್ದು, ಸತ್ಯ ಏನು ಎಂಬುದು ನನಗೆ ಮತ್ತು ಅರ್ಜುನ್ ಸರ್ಜಾಗೆ ಮಾತ್ರ ಗೊತ್ತು ಎಂದು ಮತ್ತೆ ನಟಿ ಶ್ರುತಿ ಹರಿಹರನ್ ಗುಡುಗಿದ್ದಾರೆ.
ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ, ಧರ್ಮ ಮತ್ತು ರಾಜಕೀಯವಿದೆ ಎಂದು ಅರ್ಜುನ್ ಸರ್ಜಾ ಪರ ಕೆಲವರು ವಾದಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇಂದು ತಮ್ಮ ಟೀಕಾಕಾರರ ವಿರುದ್ಧ ನಟಿ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದು, ಸತ್ಯ ಏನು ಎಂಬುದು ನನಗೆ ಮತ್ತು ಅರ್ಜುನ್ ಸರ್ಜಾಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.
ತನ್ನ ವಿರುದ್ಧ ಬರುತ್ತಿರುವ 'ಸತ್ಯಕ್ಕೆ ದೂರವಾದ ಮಾತು, ಚರ್ಚೆಗಳಿಗೆ ಕ್ಲಾರಿಫಿಕೇಷನ್ ಕೊಡಬೇಕಿದೆ. ನನಗೆ ಮತ್ತು Mr. ಅರ್ಜುನ್ ಸರ್ಜಾಗೆ ಮಾತ್ರ ಸತ್ಯ ಗೊತ್ತಿದೆ. ಇದು ಅರ್ಜುನ್ ಸರ್ಜಾ ವಿರುದ್ಧ ನಾನು ಎತ್ತಿದ ದನಿ. ನೀವು ಊಹಿಸಿದ ಹಾಗೆ ನನ್ನ ಹಿಂದೆ ಯಾರೂ ಇಲ್ಲ. ನನಗೆ ಹೀಗೆ ಮಾಡಲು ಯಾರೂ ಕುಮ್ಮಕ್ಕು ಕೊಟ್ಟಿಲ್ಲ. ಚೇತನ್, ಪ್ರಕಾಶ್ ರೈ, ಕವಿತಾ ಲಂಕೇಶ್ ಯಾರೊಬ್ಬರು ಇದಕ್ಕೆ ಕಾರಣರಲ್ಲ. ನನ್ನ ಬೆಂಬಲಕ್ಕೆ ನಿಂತವರು ಅವರು, ಅದಕ್ಕಾಗಿ ಕೃತಜ್ಞಳಾಗಿರುತ್ತೇನೆ ಎಂದು ಶೃತಿ ಸ್ಪಷ್ಟಪಡಿಸಿದ್ದಾರೆ.
ಅಂತೆಯೇ ತಮ್ಮ ಆರೋಪಕ್ಕೆ ಸ್ಪಷ್ಟನೆ ನೀಡಿರುವ ನಟಿ ಶೃತಿ ಹರಿಹರನ್, 'ಅರ್ಜುನ್ ಸರ್ಜಾ ಮೇಲಿನ ಆರೋಪದಲ್ಲಿ ಸತ್ಯವಿದೆ. ನನ್ನ ವಿರುದ್ಧ ಸರ್ಜಾ ಮಾನನಷ್ಟ ಮೊಕದ್ದಮೆ ಹಾಕಿದರೆ ಕಾನೂನು ಹೋರಾಟಕ್ಕೆ ನಾನು ಸಿದ್ಧವಾಗಿದ್ದೇನೆ. ನಾನು ನನ್ನ ಸಾಕ್ಷ್ಯಗಳನ್ನ ಯಾರಿಗೂ ಕೊಡೋ ಅವಶ್ಯಕತೆ ಇಲ್ಲ. ಯಾರನ್ನ ನಂಬಬೇಕು.. ಬಿಡಬೇಕು ಎನ್ನುವುದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರ. ಕೋರ್ಟ್‌ನಲ್ಲಿ ಸಾಕ್ಷ್ಯಗಳನ್ನು ಕೊಡುತ್ತೇನೆ. ಅಲ್ಲಿ ಸಾಕ್ಷ್ಯಾಧಾರ ಪರಿಶೀಲನೆ ನಂತರ ನನಗೆ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ.
ಸರ್ಜಾ ಕುಟುಂಬದ ಫ್ಯಾನ್ಸ್ ಕ್ಲಬ್ ಗಳಿಂದ ಬೆದರಿಕೆ
ಇದೇ ವೇಳೆ ತಮಗೆ ಸರ್ಜಾ ಕುಟುಂಬದ ಫ್ಯಾನ್ಸ್ ಕ್ಲಬ್ ಗಳಿಂದ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ ಎಂದು ಶೃತಿ ಹೇಳಿದ್ದು, ಟ್ರೋಲ್ ಮತ್ತು ನನ್ನ ಮೇಲಿನ ಬರಹಗಳಿಂದ ನನಗೇನೂ ಆಗಬೇಕಿಲ್ಲ. ಸತ್ಯ ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ನಿಮಗೆ ತೋಚಿದ್ದು ನೀವು ಮಾಡಿ, ನನಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಮುನಿರತ್ನ, ಸಾರಾ ಗೋವಿಂದು ಹಾಗೂ ಚಿನ್ನೇಗೌಡ ಸೇರಿದಂತೆ ವಾಣಿಜ್ಯ ಮಂಡಳಿ ಹಿರಿಯರೇ, ನೀವು ನಿಮ್ಮ ಹುದ್ದೆ ಅಲಂಕರಿಸಿರುವುದು ಕಲಾವಿದರ ಹಕ್ಕುಗಳ ಸಂರಕ್ಷಣೆಗೆ. ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಮಾಡದೆ ಕೆಲಸ ಮಾಡುವುದು ನಿಮ್ಮ ಜವಾಬ್ದಾರಿ ಎಂದು ಪರೋಕ್ಷವಾಗಿ ಚೇಂಬರ್ ಹಿರಿಯರಿಗೂ ಟಾಂಗ್ ನೀಡಿದ್ದಾರೆ.
ಸಂಗೀತಾ ಭಟ್, ಸಂಜನಾ, ಏಕ್ತಾ ಸೇರಿದಂತೆ ದನಿ ಎತ್ತಿದ ನೊಂದ ಯುವತಿಯರಿಗೆ ಯಾರಿಗೂ ರಕ್ಷಣೆ ಕೊಟ್ಟಿಲ್ಲ. ಯಾರು ಏನೇ ಹೇಳಿದರೂ ನನಗೆ ತೋಚಿದ್ದೇ ಮಾಡುತ್ತೇನೆ. ನನ್ನ ಆಲೋಚನೆಯಂತೆ ಹೋರಾಟ ಮಾಡುತ್ತೇನೆ. ಇದು ನಿರಂತರ ಹೋರಾಟವಾಗಲಿದ್ದು ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಶೃತಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos