ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಸದ್ಯ ಮೀಟೂ ತಾರಕಕ್ಕೇರಿದ್ದು ಇತ್ತೀಚೆಗಷ್ಟೇ ಮೀಟೂ ಆರೋಪ ಮಾಡಿ ತಾನು ಚಿತ್ರರಂಗವನ್ನು ತೊರೆಯುವುದಾಗಿ ಹೇಳಿದ್ದ ನಟಿ ಸಂಗೀತಾ ಭಟ್ ಇದೀಗ ನನ್ನನ್ನು ಬದುಕಲು ಬಿಡಿ ಎಂದು ಕಣ್ಣೀರಿಟ್ಟಿದ್ದಾರೆ.
ನಾನು ಯಾರ ವಿರುದ್ಧವೂ ಮೀಟೂ ಆರೋಪ ಮಾಡಿಲ್ಲ. ಬದಲಾಗಿ ನನಗಾದ ಅನುಭವಗಳನ್ನು ಮಾತ್ರ ಹಂಚಿಕೊಂಡಿದ್ದೇನೆ. ಯಾವುದ್ಯಾವುದೋ ನಟರ ಜತೆ ಲಿಂಕ್ ಮಾಡಿ ನಟರ ಹೆಸರನ್ನು ಹಾಳು ಮಾಡಬೇಡಿ ಎಂದು ಸಂಗೀತಾ ಭಟ್ ಮನವಿ ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ತಮ್ಮ ಅಳಲನ್ನು ತೊಡಿಕೊಂಡಿರುವ ಸಂಗೀತಾ ಭಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಸುಳ್ಳು ವದಂತಿ ಹರಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ ಫೇಸ್ ಬುಕ್ ನಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿರುವವರ ಬಗ್ಗೆ ಮಾತನಾಡಿ, ಆ ರೀತಿ ಮಾಡದಂತೆ ನೆಟಿಗರನ್ನು ವಿನಂತಿಸಿಕೊಂಡಿದ್ದಾರೆ.
ಮಾಧ್ಯಮದವರೂ ವಿನಾಕಾರಣ ನನ್ನ ಹೆಸರಿನ ಜತೆ ಬೇರೆ ಬೇರೆ ನಟರ ಹೆಸರನ್ನು ತಳುಕು ಹಾಕುತ್ತಿದ್ದಾರೆ. ಇದು ಸರಿಯಲ್ಲ. ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಅವಲತ್ತುಕೊಂಡಿದ್ದಾರೆ.