ಸಂಗೀತಾ ಭಟ್-ಗುರುಪ್ರಸಾದ್-ಶೃತಿ ಹರಿಹರನ್
ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಸದ್ಯ ಮೀಟೂ ಆರೋಪಗಳು ಬಿರುಗಾಳಿಯನ್ನು ಎಬ್ಬಿಸಿದ್ದು ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಹಾಗೂ ನಟಿ ಸಂಗೀತಾ ಭಟ್ ಮಾಡಿದ್ದ ಮೀಟೂ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಗುರುಪ್ರಸಾದ್ ಅವರು ಮೀಟೂ ಆರೋಪಗಳ ವಿರುದ್ಧ ಕಿಡಿಕಾರಿದ್ದಾರೆ.
ಮೀಟೂ ಆರೋಪಗಳನ್ನು ಮಾಡುವ ಮೂಲಕ ತಾವು ಪತಿವ್ರತೆ ಎಂದು ಸಾಬೀತುಪಡಿಸಿಕೊಳ್ಳಲು ನಟಿಯರು ಮುಂದಾಗುತ್ತಿದ್ದಾರೆ. ಈ ಅಭಿಯಾನ ಬೇರೆ ಕಡೆಯಿಂದ ಬಂದಿದೆ. ವೇದಿಕೆ ಸಿಗುತ್ತೆ ಅಂತ ಬೇರೆ ರೀತಿಯಾಗಿ ಬಳಸಿಕೊಳ್ಳಬಾರದು. ತಮ್ಮ ಮನೆಯಲ್ಲಿ ಗಂಡ, ಅತ್ತೆ ಹಾಗೂ ಮಾವನ ಮುಂದೆ ತಾವು ಪತಿವ್ರತೆಯರು ಎಂದು ಹೇಳೋಕೆ ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಎಲ್ಲ ಹೆಣ್ಣು ಮಕ್ಕಳಲ್ಲ. ಕೆಲವು ಮಾತ್ರ ಹೀಗೆ ಮಾಡುತ್ತಿದ್ದಾರೆ ಎಂದರು.
ಅವಕಾಶ ಸಿಗುವ ಮುನ್ನ ನಟಿಯರು ಹೇಗಿರುತ್ತಾರೆ. ಅವಕಾಶ ಸಿಕ್ಕ ನಂತರ ಹೇಗೆ ಬದಲಾಗುತ್ತಾರೆ ಅನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಕಿರುಕುಳ ಆದಾಗಲೇ ವಿರೋಧಿಸಬೇಕು. ನನ್ನ ವೃತ್ತಿಗೆ ದ್ರೋಹ ಆಗುತ್ತದೆ ಎಂದು ನಾನು ಎಂಟು ನಿರ್ಮಾಪಕರಿಗೆ ಹಣ ಹಿಂತಿರುಗಿಸಿದ್ದೇನೆ. ಹೀಗೆ ಹೆಣ್ಣು ಮಕ್ಕಳ ಶೀಲಕ್ಕೆ ಅಪಾಯ ಎಂದಾಗ ಅವರು ಸಿನಿಮಾದಿಂದ ಹೊರ ಬರಬಹುದು. ಅದನ್ನು ಬಿಟ್ಟು ವರ್ಷಗಳ ನಂತರ ಈಗ ಆರೋಪಿಸುವುದರ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ಆಲೋಚಿಸಬೇಕಿದೆ ಎಂದರು.
ಗುರುಪ್ರಸಾದ್ ನಿರ್ದೇಶನದ ಎರಡನೇ ಸಲ ಚಿತ್ರದಲ್ಲಿ ನಟಿಸಿದ್ದ ಸಂಗೀತಾ ಭಟ್ ಸಹ ಮೀಟೂ ಆರೋಪ ಮಾಡಿದ್ದರು. ಇದರ ಬಗ್ಗೆ ಕೇಳಿದ್ದಕ್ಕೆ ಗುರುಪ್ರಸಾದ್ ಅವರು ಸಂಗೀತಾ ಭಟ್ ನನ್ನ ಗೆಳತಿ. ಅವರಿಗೆ ಶುಭವಾಗಲಿ. ಅವರು ಆರೋಪಿಸಿರುವುದು ಖ್ಯಾತ ನಿರ್ದೇಶಕ ಅಂತ. ಆದರೆ ನಾನು ಇನ್ನೂ ಬೆಳೆಯಬೇಕಿರುವ ಹುಡುಗ. ಅವರು ಎಲ್ಲೂ ನನ್ನ ಹೆಸರು ಹೇಳಿಲ್ಲ. ಹೇಳಿದಾಗ ನಾನು ಉತ್ತರಿಸುವೆ ಎಂದು ಗುರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos