ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಕನ್ನಡದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ರಶ್ಮಿಕಾ ಕನ್ನಡದ ವೃತ್ರ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ನಿರ್ದೇಶಕರು ನಟಿಯನ್ನು ಚಿತ್ರದಿಂದ ತೆಗೆದುಹಾಕಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ತೆಲುಗಿನ ಕೆಲ ಚಿತ್ರಗಳಲ್ಲಿ ನಟಿಸುತ್ತಿದ್ದು ಕನ್ನಡದ ವೃತ್ರ ಚಿತ್ರದಲ್ಲೂ ನಟಿಸಬೇಕಿತ್ತು. ಅದಾಗಲೇ ನಿರ್ದೇಶಕ ಗೌತಮ್ ಅಯ್ಯರ್ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಆದರೆ ಇದೀಗ ನಿರ್ದೇಶಕರು ಆಕೆಯನ್ನು ಚಿತ್ರದಿಂದ ತೆಗೆದು ಹಾಕಿದ್ದು ಹೊಸ ನಟಿಗಾಗಿ ಆಡಿಷನ್ ನಡೆಸಿದ್ದಾರೆ.
ಗೌತಮ್ ಅಯ್ಯರ್ ತಮ್ಮ ವೃತ್ರ ಚಿತ್ರವನ್ನು ಕೈಗೆತ್ತಿಕೊಂಡಿದ್ದು ರಶ್ಮಿಕಾರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದರೆ ಇತರ ಚಿತ್ರಗಲ್ಲಿ ನಟಿ ರಶ್ಮಿಕಾ ಬ್ಯುಸಿಯಾಗಿರುವುದರಿಂದ ಡೇಟ್ಸ್ ಸಮಸ್ಯೆಯಿಂದಾಗಿ ಚಿತ್ರದ ಚಿತ್ರೀಕರಣ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ರಶ್ಮಿಕಾರನ್ನು ಚಿತ್ರದಿಂದ ತೆಗೆದು ಹಾಕಲಾಗಿದೆ.
ತೆಲುಗಿನ ಗೀತಂ ಗೋವಿಂದಂ ಚಿತ್ರ ಟಾಲಿವುಡ್ ನ ಬ್ಲಾಕ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು ರಶ್ಮಿಕಾಗೆ ಬೇಡಿಕೆ ಹೆಚ್ಚಾಗಿದೆ.