ಸಿನಿಮಾ ಸುದ್ದಿ

'ನೀರ್ ದೋಸೆ' ನಿರ್ಮಾಪಕನಿಂದ ಬ್ಯಾಂಕಿಗೆ ವಂಚನೆ; ಬಂಧನ

Sumana Upadhyaya

ಬೆಂಗಳೂರು: ಬ್ಯಾಂಕಿನಿಂದ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಒದಗಿಸಿದ್ದಕ್ಕಾಗಿ ಶೇಷಾದ್ರಿಪುರಂ ಪೊಲೀಸರು ಸಿನಿಮಾ ನಿರ್ಮಾಪಕನನ್ನು ಬಂಧಿಸಿದ್ದಾರೆ.

ವಿಜಯನಗರ ನಿವಾಸಿ ಪ್ರಸನ್ನ (43 ವರ್ಷ) ನೀರ್ ದೋಸೆ ಚಿತ್ರದ ನಿರ್ಮಾಪಕ. ಶೇಷಾದ್ರಿಪುರಂ ಸಿಂಡಿಕೇಟ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ದಶಿಕ ರಮೇಶ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಸನ್ನ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಕೆಂಪಾಪುರ ಅಗ್ರಹಾರದಲ್ಲಿ ಮನೆಯನ್ನು ಹೊಂದಿರುವ ಪ್ರಸನ್ನ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾಲ ಪಡೆಯಲು ಶ್ಯೂರಿಟಿ ಪಡೆಯಲು ನಕಲಿ ದಾಖಲೆಗಳನ್ನು ಒದಗಿಸಿದ್ದರು. 2015ರಲ್ಲಿ ಅವರ ಆಸ್ತಿಗಳನ್ನು ಲೆಕ್ಕ ಹಾಕಿ ಬ್ಯಾಂಕ್ ಅಧಿಕಾರಿಗಳು 38 ಲಕ್ಷ ರೂಪಾಯಿ ಸಾಲ ನೀಡಿದ್ದರು. ಆದರೆ ಪ್ರಸನ್ನ ಅದಕ್ಕೂ ಕೆಲ ತಿಂಗಳ ಮುನ್ನ ದೈವಜ್ಞ ಕ್ರೆಡಿಟ್ ಸಹಕಾರಿ ಸೊಸೈಟಿಯಿಂದ ಮತ್ತು ಮಾರ್ಗದರ್ಶಿ ಚಿಟ್ಸ್ ಕರ್ನಾಟಕ ಪ್ರೈವೆಟ್ ಲಿಮಿಟೆಡ್ ನಿಂದ ಸಹ ಅದೇ ಆಸ್ತಿ ದಾಖಲೆಯ ಕಲರ್ ಫೋಟೋಕಾಪಿಗಳನ್ನು ನೀಡಿ 20 ಲಕ್ಷ ಮತ್ತು 38 ಲಕ್ಷ ರೂಪಾಯಿ ಸಾಲ ಪಡೆದಿದ್ದರು.

ಇದು ಗೊತ್ತಾದಾಗ ಬ್ಯಾಂಕ್ ಅಧಿಕಾರಿಗಳು ಪ್ರಸನ್ನ ಅವರನ್ನು ಸಂಪರ್ಕಿಸಿ ವಿವರಣೆ ಕೇಳಿದ್ದಾರೆ. ಆಗ ಮಾಡಿರುವ ತಪ್ಪನ್ನು ಒಪ್ಪಿಕೊಂಡು ಪ್ರಸನ್ನ ಸಾಲವನ್ನು ಹಿಂತಿರುಗಿಸುವುದಾಗಿ ಹೇಳಿ ಕಳೆದ ಜುಲೈಯಲ್ಲಿ 10 ಲಕ್ಷ ಮತ್ತು 7 ಲಕ್ಷ ರೂಪಾಯಿಗಳ ಎರಡು ಚೆಕ್ ಗಳನ್ನು ನೀಡಿದ್ದರು.

ಆದರೆ ಆ ಎರಡೂ ಚೆಕ್ ಗಳು ಬೌನ್ಸ್ ಆಗಿವೆ. ಹೀಗಾಗಿ ರಮೇಶ್ ಪೊಲೀಸರಿಗೆ ದೂರು ನೀಡಿದ್ದರು.

SCROLL FOR NEXT