ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ
ಬೆಂಗಳೂರು: ನಾನು ಎಲ್ಲಿಯೂ ಓಡಿ ಹೋಗಿಲ್ಲ, ಅಭದ್ರತೆ ಹಿನ್ನಲೆಯಲ್ಲಿ ನನ್ನ ತಾಯಿ ಮನೆಯಲ್ಲಿದ್ದೇನೆಂದು ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಮನೆಯಲ್ಲಿದ್ದ ಹಣ ಹಾಗೂ ಒಡವೆಗಳನ್ನು ಹೊತ್ತುಕೊಂಡು ಓಡಿಹೋಗಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಕೀರ್ತಿ ಗೌಡ ಅವರು, ಪತಿ ದುನಿಯಾ ವಿಜಯ್ ಜೈಲಿಗೆ ಹೋದ ಬಳಿಕ ಅವರನ್ನು ಭೇಟಿ ಮಾಡಿದ್ದೆ. ಈ ವೇಳೆ ಮನೆಯಲ್ಲಿರುವುದು ಬೇಡ ಎಂದು ಇಬ್ಬರೂ ನಿರ್ಧರಿಸಿದ್ದೆವು. ಇದರಂತೆ ನಾನು ನನ್ನ ತಾಯಿ ಮನೆಯಲ್ಲಿದ್ದೆ. ನನ್ನ ಭದ್ರತೆ ಕುರಿತಂತೆ ನಗರ ಪೊಲೀಸ್ ಆಯುಕ್ತರಿಗೆ ಪತಿ ಪತ್ರವೊಂದನ್ನು ಬರೆದಿದ್ದರು. ನನಗೆ ಭದ್ರತೆ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು. ನನ್ನ ಮನೆಯಲ್ಲಿಯೇ ನಾನು ಕಳ್ಳತನ ಮಾಡಿದ್ದೇನೆನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನನ್ನ ಪತಿ ಬಂದ ಬಳಿಕ ಅವರು ಜೈಲಿಗೆ ಹೋದಾಗಿನಿಂದಲೂ ನಡೆದ ಘಟನೆಗಳ ಬಗ್ಗೆ ವಿವರಿಸುತ್ತೇನೆ. ನಾನು ಎಲ್ಲಿಯೂ ಹೋಗಿಲ್ಲ. ನನ್ನ ತಾಯಿ ಮನೆಯಲ್ಲಿದ್ದೇನೆಂಬುದು ನನ್ನ ಪತಿಗೆ ತಿಳಿದಿದೆ. ಇಂತಹ ವದಂತಿಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ದುಡ್ಡಿಗಾಗಿ ಇಂತಹ ವಂದತಿ ಹಬ್ಬಿಸುತ್ತಿರುವುದನ್ನು ನೋಡಿದರೆ, ಅಸಹ್ಯ ಎನಿಸುತ್ತಿದೆ. ವದಂತಿ ಹಬ್ಬಿಸುತ್ತಿರುವವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಜನರಿಗೂ ಅರ್ಥವಾಗುತ್ತದೆ ಇದೊಂದು ವದಂತಿ ಎಂಬುದು ಎಂದು ತಿಳಿಸಿದ್ದಾರೆ.
ಪತಿ ಜೈಲಿಗೆ ಹೋದ ಬಳಿಕ ನೇರವಾಗಿ ತಾಯಿ ಮನೆಗೆ ಬಂದಿದ್ದೇನೆ. ಒಂದು ಬಟ್ಟೆಯನ್ನೂ ಇಲ್ಲಿಗೆ ತಂದಿಲ್ಲ. ಅದು ನನ್ನ ಮನೆ. ನನ್ನ ಮನೆಯಲ್ಲಿ ರೂ.10 ಲಕ್ಷ ತೆಗೆದುಕೊಂಡು ಬರುವ ಹಕ್ಕು ನನಗಿದೆ. ಕೆಲ ದಿನಗಳ ಹಿಂದಷ್ಟೇ ವಿಜಯ್ ಅವರನ್ನೂ ಭೇಟಿ ಮಾಡಿದ್ದೆ, ಪತಿ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದ ಬಗ್ಗೆಯೂ ಪೊಲೀಸರೊಂದಿಗೆ ಮಾತನಾಡಿದ್ದೇನೆ. ಅಗತ್ಯವಿದ್ದರೆ, ನಾನೇ ಭದ್ರತೆ ಕೇಳುತ್ತೇನೆಂದು ಹೇಳಿದ್ದೇನೆಂದಿದ್ದಾರೆ.