ಮೈಸೂರು: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆರು ದಿನಗಳ ಚಿಕಿತ್ಸೆಯ ಬಳಿಕ ಶವಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ರಾತ್ರಿ ಊಟ ಮುಗಿಸಿಕೊಂಡು ವಾಪಸ್ ಬರುವಾಗ ತಿರುವಿನಲ್ಲಿ ಅಪಘಾತ ಸಂಭವಿಸಿತು. ನಾವು ಕಾರಿನಲ್ಲಿ ಐದು ಜನ ಇದ್ದೆವು. ಆರು ಜನ ಇರಲಿಲ್ಲ ಎಂದರು.
ನನ್ನ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದೇ ಇಲ್ಲ. ನನ್ನ ಕಾರು ಅಪಘಾತವಾಗುವ ಮುನ್ನವೇ ಆ ಲೈಟ್ ಕಂಬ ಬಿದ್ದಿತ್ತು. ಕಾರನ್ನು ನನ್ನ ಗೆಳೆಯ ಓಡಿಸುತ್ತಿದ್ದರು. ಇದರಲ್ಲಿ ರಾಯ್ ಆಂಟೋನಿಯ ತಪ್ಪು ಕೂಡ ಇಲ್ಲ. ಅಪಘಾತದ ಬಗ್ಗೆ ಸಾಕಷ್ಟು ಊಹಾ ಪೋಹಾ ನಡೆದಿದೆ. ಆದರೆ ಅದೆಲ್ಲಾ ಸುಳ್ಳು ಎಂದು ದರ್ಶನ್ ಹೇಳಿದ್ದಾರೆ.
ವೈದ್ಯರು ನನಗೆ ಉತ್ತಮ ಚಿಕಿತ್ಸೆ ನೀಡಿದ್ದು, ಕೇವಲ ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ. ಒಂದು ವರ್ಷ ಸುಧಾರಿಸಿಕೊಳ್ಳುವಂತಹ ಅಪಘಾತವಾಗಿಲ್ಲ ಎಂದರು.
ಕಳೆದ ಭಾನುವಾರ ರಾತ್ರಿ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದರ್ಶನ್ ಬಲಗೈ ಮುರಿದಿತ್ತು. ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಅಪಘಾತದಲ್ಲಿ ನಟರಾದ ದೇವರಾಜ್, ಪ್ರಜ್ವಲ್ ಹಾಗೂ ಕಾರು ಚಾಲಕ ರಾಯ್ ಆಂಟೋನಿ ಗಾಯಗೊಂಡಿದ್ದರು. ನಟ ದೇವರಾಜ್, ಪ್ರಜ್ವಲ್ಗೆ ಸ್ವಲ್ಪಮಟ್ಟಿನ ಗಾಯವಾಗಿದ್ದರಿಂದ ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ನಟ ದರ್ಶನ್ ಬಲಗೈ ಮೂಳೆ ಮುರಿದ ಹಿನ್ನಲೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಪರಿಣಾಮ ಇನ್ನು ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲಾಗಿತ್ತು.