ಸಿನಿಮಾ ಸುದ್ದಿ

ಸಲಗದ 'ನೈಜ  ಕ್ಲೈಮ್ಯಾಕ್ಸ್ 'ದೃಶ್ಯ ಚಿತ್ರೀಕರಿಸಿದ ನಿರ್ದೇಶಕ ದುನಿಯಾ ವಿಜಯ್ 

Nagaraja AB

ಬೆಂಗಳೂರು:  ಸಲಗ ಚಿತ್ರದ ಮೂಲಕ ನಿರ್ದೇಶನಕ್ಕೂ ಕಾಲಿಟ್ಟಿರುವ ನಟ ದುನಿಯಾ ವಿಜಯ್ ನೈಜ ರೀತಿಯಲ್ಲಿ ಕ್ಲೈಮ್ಯಾಕ್ಸ್  ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಕ್ಲೈಮ್ಯಾಕ್ಸ್  ದೃಶ್ಯ ನೈಜ ರೀತಿಯಲ್ಲಿ ಮೂಡಿಬರಲಿ ಎಂಬ ದೃಷ್ಟಿಯಿಂದ ಕಳೆದ ವಾರ ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ನೈಜವಾಗಿ ಫೈಟಿಂಗ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ. 

ಕಡಲೆಕಾಯಿ ಪರಿಷೆಯಲ್ಲಿ ತುಂಬಿದ ಜನರ ನಡುವೆ ಆರು ಕ್ಯಾಮರಾಗಳನ್ನು ಇಟ್ಟು  ಕ್ಲೈಮ್ಯಾಕ್ಸ್ ಶೂಟ್ ನೀಡಲಾಗಿದೆ. ಈ ರೀತಿ ಚಿತ್ರೀಕರಿಸಿರುವುದು ಕನ್ನಡ ಚಿತ್ರರಂಗದಲ್ಲಿ ಮೊದಲನೇಯದಾಗಿದ್ದು, ಪ್ರೇಕ್ಷಕರು ಖಂಡಿತಾ ಇಷ್ಟಪಡಲಿದ್ದಾರೆ ಎನ್ನುತ್ತಾರೆ  ನಿರ್ಮಾಪಕ ಶ್ರೀಕಾಂತ್.

ಕಡಲೆಕಾಯಿ ಪರಿಷೆಯ ಮೊದಲ ದಿನ ಸುಮಾರು 50 ರಿಂದ 60 ಸಾವಿರ ಜನರಿದ್ದರೆ  ಎರಡನೇ ದಿನ 30 ಸಾವಿರ ಜನರು ಸೇರಿದ್ದರು. ಇದರ ಜೊತೆಗೆ 2 ಸಾವಿರ ಜ್ಯೋನಿಯರ್ ಕಲಾವಿದರೊಂದಿಗೆ ಚಿತ್ರೀಕರಣ ಮಾಡಲಾಗಿದೆ. ಸಾಹಸ ನಿರ್ದೇಶಕ ವಿನೋದ್ ಮತ್ತು ವಿಜಯ್ ಅವರ ಸಾಹಸ ಸಂಯೋಜನೆಯೊಂದಿಗೆ ಕ್ಲೈಮ್ಯಾಕ್ಸ್ ದೃಶ್ಯವನ್ನು ನಿರ್ದೇಶಕರು ಚಿತ್ರೀಕರಿಸಿಕೊಂಡಿದ್ದಾಗಿ ಹೇಳಿದ ಶ್ರೀಕಾಂತ್, ಪೊಲೀಸ್ ಕಮೀಷನರ್, ಶಾಸಕ ರವಿಸುಬ್ರಹ್ಮಣ್ಯ, ಕಾರ್ಪೋರೇಟರ್ ರಮೇಶ್ ಅವರ ನೆರವು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು. 

ಜನಸಾಗರದ ಮಧ್ಯೆ ತುಂಬಾ ಶ್ರಮ ತೆಗೆದುಕೊಂಡು ವಿಜಯ್ , ಕ್ಲೈಮ್ಯಾಕ್ಸ್ ಹಂತವನ್ನು ಚಿತ್ರೀಕರಿಸಿದ್ದಾರೆ. ಚಿತ್ರೀಕರಣ ತುಂಬೆಲ್ಲಾ ಕಡಲೆಕಾಯಿ, ವಿಜಯ್ ಹಾಗೂ ಧನಂಜಯ್ ಮತ್ತಿತರೇ ಇದ್ದಾರೆ. 10 ದಿನದ  ಶೆಡ್ಯೂಲ್ ನಲ್ಲಿ  ಆರು ದಿನದ ಕ್ಲೈಮ್ಯಾಕ್ಸ್   ಪೂರ್ಣವಾಗಿದೆ. ಕಳೆದ ಕೆಲ ದಿನಗಳಿಂದ ಮಳೆಯ ಕಾರಣ ಗುರುವಾರದಿಂದ ಮತ್ತೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗುವುದು, ಇದಕ್ಕಾಗಿ ಅದೇ ರೀತಿಯಲ್ಲಿ ಕಡಲೇ ಕಾಯಿ ಪರಿಷೆಯನ್ನು ಮರು ಸ್ಥಾಪಿಸುವುದಾಗಿ ತಿಳಿಸಿದರು. 

 ಸಲಗ ಚಿತ್ರದ ಶೇ. 90 ರಷ್ಟು ಚಿತ್ರೀಕರಣ ಮುಗಿದಿದ್ದು,  ಡಬ್ಬಿಂಗ್ ಕಾರ್ಯವನ್ನು ಆರಂಭಿಸಲಾಗಿದೆ. ಡಿಸೆಂಬರ್ 15 ರಂದು ಕ್ಲೈಮ್ಯಾಕ್ಸ್  ಚಿತ್ರೀಕರಣದ ವಿಡಿಯೋವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಶ್ರೀಕಾಂತ್, ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿರುವುದಾಗಿ ಹೇಳಿದರು. 

ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಚರಣ್ ರಾಜ್  ಸಂಗೀತ ಸಂಯೋಜಿಸಿದ್ದಾರೆ. ಶಿವಸೀನಾ ಅವರ ಛಾಯಾಗ್ರಾಹಣವಿದೆ. ಸಂಜನಾ ಆನಂದ್ ನಾಯಕಿ ನಟಿಯಾಗಿದ್ದು, ಅಚ್ಯುತ್ ರಾವ್, ಸುಧಿ, ತ್ರಿವೇಣಿ ರಾವ್, ಯಶ್ ಶೆಟ್ಟಿ ಮತ್ತಿತರರ ತಾರಬಳಗವಿದೆ. 

SCROLL FOR NEXT