ಬೆಂಗಳೂರು: ನಟ ಕಿಚ್ಚಾ ಸುದೀುಪ್ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಟೀಸರ್ ವೀಕ್ಷಿಸಿದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟೀಸರ್ ಗೆ ಫಿದಾ ಆಗಿದ್ದಾರೆ.
ಕನ್ನಡದ ಬಾದ್ ಷಾ ಕಿಚ್ಚ ಸುದೀಪ್ ಸಂಕ್ರಾಂತಿ ಹಬ್ಬದ ದಿನದಂದು ತಮ್ಮ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದು, ಇಂದು ಪೈಲ್ವಾನ್ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ. ಆ ಮೂಲಕ ಅಖಾಡದಲ್ಲಿ ಸುದೀಪ್ ಕುಸ್ತಿ ಖದರ್ ತೋರಿಸಿದ್ದು, ಕಿಚ್ಚನ ಹುರಿಗಟ್ಟಿದ ದೇಹ, ಹೆಬ್ಬಲಿಯಂತೆ ಘರ್ಜಿಸೋ ಆರ್ಭಟ ಈಗಾಗಲೇ ಜೋರಾಗಿದ್ದು, ಪೈಲ್ವಾನನ ಟೀಸರ್ ಅಬ್ಬರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.
ಇನ್ನು ಬಾಲಿವುಡ್ ಸಿನಿ ಅಂಗಳದ ಕುಸ್ತಿಯಲ್ಲಿ ಪಳಗಿದ್ದ 'ಸುಲ್ತಾನ್' ಸಲ್ಮಾನ್ ಖಾನ್ ಕೂಡ ಪೈಲ್ವಾನ್ ಟೀಸರ್ ನೋಡಿ ಕಿಚ್ಚನಿಗೆ ಶುಭ ಕೋರಿದ್ಜಾರೆ. ಪೈಲ್ವಾನ್ ಟೀಸರ್ ನೋಡಿದ ಸಲ್ಲು, ‘ನಾವು ಆರಂಭಿಸಿದ್ದನ್ನು ನೀವು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೀರಿ.. ಆಲ್ ದಿ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಬಾಲಿವುಡ್ ನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮ ಕೂಡ ಟ್ವೀಟ್ ಮಾಡಿದ್ದು, ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್ ಟ್ಯಾಲೆಂಟ್ ಹೊಂದಿರೋ ಬಹುಮುಖ ಪ್ರತಿಭೆಯೊಂದು ಎಂಟ್ರಿ ಕೊಟ್ಟಿದ್ದು ಸುಲ್ತಾನನ್ನೇ ಮೀರಿಸೋ ಪೈಲ್ವಾನ್ ಬಂದಿದ್ದಾನೆ ಅಂತಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.