ಸಿನಿಮಾ ಸುದ್ದಿ

'ಥಗ್ಸ್ ಆಫ್ ಹಿಂದೋಸ್ತಾನ್' ವೈಫಲ್ಯ: ನನ್ನ ಮೇಲಿನ ಕೋಪವನ್ನು ಚಿತ್ರದ ಮೇಲೆ ತೋರಿಸಿದ್ದಾರೆ- ಅಮೀರ್ ಖಾನ್

Srinivasamurthy VN
ಮುಂಬೈ: ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ತಮ್ಮ'ಥಗ್ಸ್ ಆಫ್ ಹಿಂದೋಸ್ತಾನ್' ವೈಫಲ್ಯದ ಕುರಿತು ಮಾತನಾಡಿರುವ ನಟ ಅಮೀರ್ ಖಾನ್, ತಮ್ಮ ಮೇಲಿನ ಕೋಪವನ್ನು ಜನ ಚಿತ್ರದ ಮೇಲೆ ತೀರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರದ ವೈಫಲ್ಯದ ಕುರಿತು ಮಾತನಾಡಿರುವ ಅಮೀರ್ ಖಾನ್, 'ಪ್ರೇಕ್ಷಕರಿಗೆ ಚಿತ್ರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸಂಪೂರ್ಣ ಹಕ್ಕಿದೆ. ನಾನು ಕೆಲಸ ಮಾಡಿದ ಪ್ರತೀ ನಿರ್ದೇಶಕರೂ ಉತ್ತಮ ಚಿತ್ರ ನೀಡಬೇಕು ಎಂಬ ಉದ್ದೇಶದಿಂದಲೇ ಕೆಲಸ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗದೇ ಇರಬಹುದು. ಚಿತ್ರ ನಿರ್ಮಾಣ ತುಂಬ ಕಠಿಣ ಕೆಲಸ, ನಾನು ಕೂಡ ಆ ತಂಡದ ಸದಸ್ಯನ್ನಷ್ಚೇ..ನನ್ನ ನಿರ್ದೇಶಕನಿಂದ ತಪ್ಪಾಗಿದೆ ಎಂದರೆ, ಆ ತಪ್ಪಿನಲ್ಲಿ ನನ್ನ ಪಾತ್ರವೂ ಇರುತ್ತದೆ ಎಂದು ಹೇಳಿದ್ದಾರೆ.
ತಪ್ಪುಗಳಿಂದ ನಾವು ಪಾಠ ಕಲಿಯುತ್ತೇವೆ. ಆದರೆ ಆ ತಪ್ಪುಗಳು ಪುನರಾವರ್ತನೆಯಾಗಬಾರದು. ನನ್ನನ್ನು ನಂಬಿ ಜನ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಆದರೆ ನಿರಾಶೆ ಅನುಭವಿಸಿದ್ದಾರೆ.. ಚಿತ್ರದ ಸಂಪೂರ್ಣ ವೈಫಲ್ಯದ ಜವಾಬ್ದಾರಿಯನ್ನು ನಾನೇ ವಹಿಸುತ್ತೇನೆ. ಆದರೆ ಚಿತ್ರಕ್ಕೆ ಬೆಂಬಲ ಸೂಚಿಸಿದ, ಚಿತ್ರ ಚೆನ್ನಾಗಿದೆ ಎಂದು ಹೇಳಿದ ಕೆಲವರನ್ನೂ ಕೂಡ ನಾನು ನೋಡಿದ್ದೇನೆ. ಅಂತೆಯೇ ಚಿತ್ರವನ್ನು ಸಂಪೂರ್ಣವಾಗಿ ವಿರೋಧಿಸಿದ ಜನರನ್ನೂ ನೋಡಿದ್ದೇನೆ. ಆದರೆ ಈ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಚಿತ್ರ ವೀಕ್ಷಣೆ ಮಾಡಿದ ಜನರಿಗೆ ಅದರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಸಂಪೂರ್ಣ ಹಕ್ಕಿದೆ. ಸುದೀರ್ಘ ವರ್ಷಗಳಿಂದ ನನ್ನ ಚಿತ್ರ ಸೋತಿರಲಿಲ್ಲ. ಈಗ ಜನರಿಗೆ ತಮ್ಮ ಕೋಪ ತೀರಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿತ್ತು ಎಂದು ಅಮೀರ್ ಖಾನ್ ಹೇಳಿದ್ದಾರೆ.
SCROLL FOR NEXT