ಸಿನಿಮಾ ಸುದ್ದಿ

ಮತ್ತೆ ಕಿರುತೆರೆಗೆ ಪವರ್ ಸ್ಟಾರ್ ಪುನೀತ್: ಜೂನ್ 22ರಿಂದ ‘ಕನ್ನಡದ ಕೋಟ್ಯಧಿಪತಿ'

Raghavendra Adiga
ಬೆಂಗಳೂರು: ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೂನ್ 22ರಿಂದ ಆರಂಭವಾಗಲಿದ್ದು, ಒಟ್ಟು 43 ಸಂಚಿಕೆಗಳಲ್ಲಿ ಮೂಡಿಬರಲಿದೆ. ಏಳು ವರ್ಷಗಳ ಬಳಿಕ ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್, ಈ ಶೋ ನಡೆಸಿಕೊಡಲಿದ್ದು, ಪ್ರತಿ ಶನಿವಾರ, ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರದಲ್ಲಿ ಭಾಗವಹಿಸಲು ಈಗಾಗಲೇ ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಆಡಿಷನ್ ನಡೆದಿದ್ದು, ನೂರಾರು ಜನರು ಪಾಲ್ಗೊಂಡಿದ್ದರು. ಕೋಟ್ಯಧಿಪತಿಯಾಗಬೇಕು ಎಂಬುದು ಬಹುತೇಕರ ಕನಸು. ಹೀಗಾಗಿ ಈ ಬಾರಿ ವೀಕ್ಷಕರೂ ಅವಕಾಶ ಕಲ್ಪಿಸಲಾಗಿದೆ. ವೂಟ್ ಮತ್ತು ಮೈ ಜಿಯೋ ಆಪ್ ಗಳಲ್ಲಿ ‘ಪ್ಲೇ ಅಲಾಂಗ್’ ಆರಂಭಿಸಲಾಗಿದ್ದು, ಕಾರ್ಯಕ್ರಮ ವೀಕ್ಷಿಸುವ ಜನರು, ಶೋ ನಡುವೆ ಕೇಳಲಾಗುವ ಪ್ರಶ್ನೆಗಳಿಗೆ ‘ಪ್ಲೇ ಅಲಾಂಗ್’ ನಲ್ಲಿ ಉತ್ತರಿಸಿ ಬಹುಮಾನ ಗೆಲ್ಲಬಹುದು.
ಎರಡು ಬಾರಿ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮ ನಡೆಸಿಕೊಟ್ಟಿರುವ ಪುನೀತ್, ಹಲವು ಬಗೆಯ ಜನರನ್ನು ಭೇಟಿಯಾಗಿದ್ದರೂ, ಆಗಾಗ್ಗೆ ನೆನಪಾಗುವ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ “ಕೋಟಿ ರೂಪಾಯಿ ಗೆದ್ದು, ಕನ್ನಡದ ಕೋಟ್ಯಧಿಪತಿ’ ಎನಿಸಿಕೊಂಡ ಯುವಕ ನೆನಪಾಗುತ್ತಿರುತ್ತಾನೆ” ಎಂದು ಉತ್ತರಿಸಿದರು.
“ಬಾಲಿವುಡ್ ಬಿಗ್ ಬಿ ನನ್ನ ಅಚ್ಚುಮೆಚ್ಚಿನ ನಟರಲ್ಲೊಬ್ಬರು. ಅವರು ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ಅಪ್ಪಾಜಿ ಇಷ್ಟಪಟ್ಟು ವೀಕ್ಷಿಸುತ್ತಿದ್ದರು. ಹೀಗಾಗಿಯೇ 2011 ಮತ್ತು 2012ರಲ್ಲಿ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿದೆ. ಇದೀಗ ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಸ್ಪರ್ಧಿಗಳಂತೆ ನಾನೂ ಕೂಡು ಉತ್ಸುಕನಾಗಿದ್ದೇನೆ, ಯಾರಾಗುತ್ತಾರೆ ಕನ್ನಡದ ಕೋಟ್ಯಧಿಪತಿ ಎಂಬ ಕುತೂಹಲ ನನ್ನಲ್ಲೂ ಇದೆ” ಎಂದು ತಿಳಿಸಿದರು.
“ಅಮಿತಾಭ್ ಬಚ್ಚನ್ ಅವರಂತೆ ಕಾರ್ಯಕ್ರಮ ನಡೆಸಿಕೊಡಲು ನನ್ನಿಂದ ಸಾಧ್ಯವೇ ಎಂಬ ಭಯವಿತ್ತು. ಆದರೆ ಅಮ್ಮ ಪಾರ್ವತಮ್ಮ ರಾಜ್ ಕುಮಾರ್, ಶಿವಣ್ಣ, ರಾಘಣ್ಣ ಧೈರ್ಯ ತುಂಬಿದರು. ಕಾರ್ಯಕ್ರಮ ನಡೆಸಿಕೊಡುವಾಗ ಸ್ಪರ್ಧಿಗಳ ಹುಮ್ಮಸ್ಸು, ವಿಶ್ವಾಸ, ಜೀವನ ಪ್ರೀತಿಯಿಂದ ನಾನೂ ಸಾಕಷ್ಟು ಕಲಿತಿದ್ದೇನೆ. ಸ್ಪರ್ಧಿಗಳು ಸರಸ್ವತಿಯೊಂದಿಗೆ ಬಂದು ಬುದ್ಧಿವಂತಿಕೆಯಿಂದ ಆಡಿ ಲಕ್ಷ್ಮಿಯನ್ನು ಕರೆದುಕೊಂಡು ಹೋಗುತ್ತಾರೆ” ಎಂದು ಪುನೀತ್ ರಾಜ್ ಕುಮಾರ್ ಹೇಳಿದರು.
SCROLL FOR NEXT