ಬೆಂಗಳೂರು: ನಟಿ ವಿಜಯಲಕ್ಷ್ಮಿ ಮತ್ತು ನಟ ರವಿ ಪ್ರಕಾಶ್ ಅವರ ನಡುವಿನ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದ್ದು, ಈ ಬಾರಿ ನಟಿ ವಿಜಯಲಕ್ಷ್ಮಿ ವಿರುದ್ಧ ನಟ ರವಿ ಪ್ರಕಾಶ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಹೌದು.. ಈ ಹಿಂದೆ ಸಹಾಯದ ನೆಪದಲ್ಲಿ ಕಿರುಕುಳ ನೀಡಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ದೂರಿದ್ದ ಅದೇ ರವಿ ಪ್ರಕಾಶ್ ಇದೀಗ ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮೂಲಗಳ ಪ್ರಕಾರ ನಟಿ ವಿಜಯಲಕ್ಷ್ಮಿ ಹಾಗೂ ಸಹೋದರಿ ಉಷಾದೇವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಾಲ ನೀಡಿದ್ದ ಹಣವನನ್ನು ಮರುಪಾವತಿಸುವಂತೆ ಕೇಳಿಕೊಂಡಾಗ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ನಟ ರವಿಪ್ರಕಾಶ್ ದೂರು ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಎಫ್ಐಆರ್ ಕೂಡ ದಾಖಲಿಸಲಾಗಿದ್ದು, ಪ್ರಕರಣವನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ.
ಈ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಲಕ್ಷ್ಮಿ ಕುಟುಂಬ ಸಹಾಯಕ್ಕಾಗಿ ಚಿತ್ರರಂಗದ ಸಹಾಯ ಯಾಚಿಸಿದ್ದರು. ಈ ವೇಳೆ ನಟ ರವಿಪ್ರಕಾಶ್ ಒಂದು ಲಕ್ಷ ರೂ. ಧನ ಸಹಾಯ ಮಾಡಿದ್ದರು. 2 ದಿನದಲ್ಲಿ ವಾಪಸ್ಸು ನೀಡುತ್ತೇನೆ ಎಂದು ವಿಜಯಲಕ್ಷ್ಮಿ ಕುಟುಂಬ ತನ್ನಿಂದ ಹಣ ಪಡೆದಿದ್ದರು. ಅದನ್ನು ಮರಳಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ನಟ ರವಿಪ್ರಕಾಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ಅಕ್ಕ ಉಷಾದೇವಿ ಕೂಡ ರವಿಪ್ರಕಾಶ್ ವಿರುದ್ಧ ದೂರು ನೀಡಿದ್ದರು. ರವಿ ಆರೋಗ್ಯ ವಿಚಾರಿಸುವ ನೆಪದಲ್ಲಿ ಆಸ್ಪತ್ರೆಗೆ ಬಂದು ಕಿರುಕುಳ ನೀಡಿದ್ದಾರೆ. ಪದೇ ಪದೆ ದೂರವಾಣಿ ಕರೆಮಾಡಿ ಕಿರುಕುಳ ನೀಡುತ್ತಿದ್ದರು ಎಂದು ವಿಜಯಲಕ್ಷ್ಮೀ ಆರೋಪಿಸಿ ದೂರು ದಾಖಲಿಸಿದ್ದರು. ಈ ಬಗ್ಗೆ ಮಾತನಾಡಿದ್ದ ರವಿಪ್ರಕಾಶ್, ನಾನು ಅವರಿಗೆ ಮಾಡಿರುವ ಮಸೇಜ್ ಗಳು ಹಾಗೂ ಕಾಲ್ ರೆಕಾರ್ಡ್ ನನ್ನ ಬಳಿ ಇವೆ. ಅವರು ನನಗೆ ತಂಗಿ ಇದ್ದ ಹಾಗೆ. ಮಾನವೀಯತೆ ಆಧಾರದಲ್ಲಿ ನಾನು ಸಹಾಯ ಮಾಡಿದ್ದೆನೇ ಹೊರತು ಬೇರೆ ಯಾವ ಉದ್ದೇಶವಿಲ್ಲ ಎಂದು ಹೇಳಿದ್ದರು. ಅಂತೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ಸಲ್ಲಿಸಿದ್ದರು. ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ರವಿಪ್ರಕಾಶ್ ತಮಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾರೆ.