ಸಿನಿಮಾ ಸುದ್ದಿ

ಹೊಸಬರ ಜೊತೆ ಕೆಲಸ ಮಾಡುವುದು ರಿಸ್ಕ್, ಆದರೆ ನನಗೆ ಅದು ಖುಷಿ ಕೊಡುತ್ತದೆ: ಯೋಗರಾಜ್ ಭಟ್

Sumana Upadhyaya
ನಿರ್ದೇಶಕ ಯೋಗರಾಜ್ ಭಟ್ ಪಂಚತಂತ್ರ ಮೂಲಕ ಮತ್ತೆ ಸಿನಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಚಿತ್ರ ಈಗಾಗಲೇ ಹಾಡುಗಳಿಂದ ಸುದ್ದಿ ಮಾಡಿದೆ. ಚಿತ್ರ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಭಟ್ರು ಇದ್ದಾರೆ. ಚಿತ್ರಕ್ಕೆ ಕಥೆಯೇ ಪ್ಲಸ್ ಪಾಯಿಂಟ್ ಆಗುತ್ತದೆ, ರೇಸಿಂಗ್ ಕೂಡ ಚಿತ್ರದ ಮತ್ತೊಂದು ಹೈಲೈಟ್ ಎಂಬ ವಾದ ಅವರದ್ದು.
ಆಮೆ ಮತ್ತು ಮೊಲದ ಕಥೆಯನ್ನು ಮೂಲವಾಗಿಟ್ಟುಕೊಂಡು ಚಿತ್ರವನ್ನು ತಯಾರಿಸಲಾಗಿದೆಯಂತೆ. ಈ ಹಿಂದಿನ ತಮ್ಮ ಚಿತ್ರಕ್ಕಿಂತ ಇದು ಭಿನ್ನವಾಗಿದೆ, ಅದು ತೆರೆಯ ಮೇಲೆ ಪ್ರೇಕ್ಷಕರಿಗೆ ಗೊತ್ತಾಗುತ್ತದೆ ಎನ್ನುತ್ತಾರೆ ಭಟ್ಟರು.
ಯುವಜನತೆ ಮತ್ತು ಹಿರಿಯರ ನಡುವೆ ತಲೆಮಾರಿನ ಅಂತರದ ಬಗ್ಗೆ ಕೂಡ ಚಿತ್ರದಲ್ಲಿ ಒತ್ತಿ ಹೇಳಲಾಗುತ್ತಿದೆ. ಚಿತ್ರದ ನಾಯಕ ನಾಯಕಿಯರೆಲ್ಲ ಹೊಸಬರೇ. ರಂಗಾಯಣ ರಘುರಂತಹ ಕೆಲ ಹಿರಿಯ ನಟರಿದ್ದಾರೆ. ಹೊಸಬರ ಜೊತೆ ಚಿತ್ರ ಮಾಡುವುದೆಂದರೆ ನನಗೆ ಖುಷಿಯ ವಿಚಾರ,ಪರದೆಯ ಮೇಲೆ ಅವರಲ್ಲಿ ಒಂದು ಹೊಸತನವಿರುತ್ತದೆ. ಹೊಸಬರಲ್ಲಿ ಹೊಸ ಹೊಸ ಆಲೋಚನೆಗಳಿರುತ್ತವೆ. ಹೊಸಬರಿಗೆ ಹೇಳಿಕೊಡುವಾಗ ನಾವು ಕೂಡ ಅನೇಕ ವಿಷಯಗಳನ್ನು ಕಲಿಯುತ್ತೇವೆ. ಅದನ್ನು ಚಿತ್ರದ ಬರವಣಿಗೆಯಲ್ಲಿ ಅಳವಡಿಸಿಕೊಳ್ಳುತ್ತೇವೆ.ಸಾಮಾನ್ಯವಾಗಿ ಎಲ್ಲರೂ ಸ್ಟಾರ್ ಜೊತೆ ಸಿನಿಮಾ ಮಾಡಬೇಕೆಂದುಕೊಳ್ಳುತ್ತಾರೆ. ಆದರೆ ಹೊಸಬರಿಗೆ ಸಹ ಅವಕಾಶ ಕೊಡಬೇಕು. ಅವರನ್ನು ಗುರುತಿಸಿ ಬೆಳೆಸಬೇಕು. ಅಷ್ಟಕ್ಕೂ ನಿನ್ನೆಯ ಹೊಸಬರೇ ಇಂದಿನ ಸ್ಟಾರ್ ಗಳಲ್ಲವೇ, ಸ್ಟಾರ್ ಗಳಿಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳಿರುವುದರಿಂದ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸ್ವಲ್ಪ ರಿಸ್ಕ್, ಆದರೆ ನಾನದನ್ನು ಸಂತೋಷಪಡುತ್ತೇನೆ ಎಂದರು.
ಪಂಚತಂತ್ರ ಕಥೆ ಮಾಸ್ತಿ ಮಂಜು ಮತ್ತು ಕಾಂತಪ್ಪ ಅವರ ಐಡಿಯಾ. ಅದಕ್ಕೆ ರೆಕ್ಕೆಪುಕ್ಕವನ್ನು ನಾನು ಸೇರಿಸಿದೆ. ಅದಕ್ಕೆ ನಾನು ನನ್ನದೇ ಸ್ಟೈಲ್ ನಲ್ಲಿ ಸಾಹಿತ್ಯ ಮತ್ತು ಸಂಭಾಷಣೆ ಬರೆದೆ. ಈ ಚಿತ್ರದ ವಿಭಿನ್ನತೆಯನ್ನು ಪ್ರೇಕ್ಷಕರು ಗುರುತಿಸುತ್ತಾರೆ ಎಂದರು ಯೋಗರಾಜ್ ಭಟ್.
ಈಗ ಎಲೆಕ್ಷನ್ ಟೈಮ್ ಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದೇಕೆ ಎಂದು ಕೇಳಿದ್ದಕ್ಕೆ ಇದಕ್ಕೆ ಇನ್ನೊಂದು ವಾರ ಬಿಟ್ಟು ನಿಮಗೇ ಗೊತ್ತಾಗುತ್ತದೆ ಎಂದರು. ಎಲೆಕ್ಷನ್ ರೇಸ್ ಗೆ ತಕ್ಕಂತೆ ತಮ್ಮ ಚಿತ್ರದ ರೇಸ್ ಕೂಡ ಜೋರಾಗಿರುತ್ತದೆ ಎಂದರು. ಸ್ವತಃ ಭಟ್ಟರಿಗೆ ಕ್ರೀಡೆಯೆಂದರೆ ಅಚ್ಚುಮೆಚ್ಚು. ವಾಲಿಬಾಲ್, ಕ್ರಿಕೆಟ್ ಮತ್ತು ಟೇಬಲ್ ಟೆನಿಸ್ ಪ್ರಿಯರಂತೆ. ಅದು ಕೂಡ ರೇಸಿಂಗ್ ನ್ನು ಚಿತ್ರದಲ್ಲಿ ತರಲು ಕಾರಣವಾಗಿರಬಹುದು.
SCROLL FOR NEXT