ಸೂಜಿದಾರ ಚಿತ್ರದಲ್ಲಿ ನಟಿ ಹರಿಪ್ರಿಯಾ
ಬೆಲ್ ಬಾಟಮ್ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಹರಿಪ್ರಿಯಾ ಅವರು 'ಸೂಜಿದಾರ' ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಸೂಜಿ ಮತ್ತು ದಾರದ ಶೀರ್ಷಿಕೆಯನ್ನು ಹೊಂದಿರುವ ಚಿತ್ರ ಮೈ ಮನ ಪೋಣಿಸು ಎಂಬ ಟ್ಯಾಗ್ ಲೈನ್ ಹೊಂದಿದೆ.
ಹರಿದ ಬಟ್ಟೆಯನ್ನು ಹೊಲಿಯಲು ಬಳಸುವ ಸೂಜಿದಾರದಂತೆ ಜೀವನದಲ್ಲಿ ಕೂಡ ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಸೂಜಿ ಮತ್ತು ದಾರ ಬೇಕು ಎಂಬುದು ಚಿತ್ರದ ಕಥೆಯ ತಿರುಳಾಗಿದೆ ಎಂದರು ಹರಿಪ್ರಿಯಾ.
ತಮ್ಮ ವೃತ್ತಿ ಜೀವನದಲ್ಲಿ ಸೂಜಿದಾರದ ಅವಶ್ಯಕತೆಯಿದೆ ಎಂದು ನಿಮಗೆ ಅನಿಸಿದೆಯೇ ಎಂದು ಕೇಳಿದ್ದಕ್ಕೆ ಖಂಡಿತವಾಗಿಯೂ ಇಲ್ಲ. ನಾನು ಖ್ಯಾತ ನಟಿಯಾಗುತ್ತೇನೆಂದು ಯೋಚನೆಯೇ ಮಾಡಿರಲಿಲ್ಲ, ಎರಡು ಮೂರು ಚಿತ್ರಗಳಲ್ಲಿ ನಟಿಸಿದ ನಂತರ ಚಿತ್ರೋದ್ಯಮದ ಬಗ್ಗೆ ನನಗೆ ಆಸಕ್ತಿ ಮೂಡಿತು.
ಕಳ್ಳರ ಸಂತೆ ಚಿತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡೆ. ನಂತರ ತೆಲುಗಿನಲ್ಲಿ ಪಿಳ್ಳ ಜಮಿನ್ದಾರ, ತಮಿಳಿನಲ್ಲಿ ಮುರನ್, ಮಲಯಾಳಂನಲ್ಲಿ ತಿರುವಂಬಡಿ ತಂಬನ್ ಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡೆ. ನಂತರ ಉಗ್ರಂ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನೆಲೆ ನಿಂತೆ. ಅದು ಮತ್ತಷ್ಟು ನನ್ನ ವೃತ್ತಿಗೆ ಉತ್ತೇಜನ ಕೊಟ್ಟ ಚಿತ್ರ. ನಂತರ ಬಂದ ನೀರ್ ದೋಸೆ, ಭಜರಂಗಿ, ತೆಲುಗಿನಲ್ಲಿ ಜೈ ಸಿಂಹ ಮತ್ತು ಈ ವರ್ಷದ ಬೆಲ್ ಬಾಟಮ್ ಚಿತ್ರಗಳು ಯಶಸ್ವಿಯಾದವು. ಇಲ್ಲಿಯವರೆಗೆ ನನ್ನ ವೃತ್ತಿ ಜೀವನ ಮೇಲ್ಮುಖವಾಗಿಯೇ ಸಾಗಿವೆ ಎಂದರು ಹರಿಪ್ರಿಯಾ.
ಮೌನೇಶ್ ಎಲ್ ಬಡಿಗೇರ್ ನಿರ್ದೇಶನದ ಸೂಜಿದಾರ ಒಂದು ಪ್ರಯೋಗಾತ್ಮಕ ಚಿತ್ರ. ಕಮರ್ಷಿಯಲ್ ಮತ್ತು ಹೊಸ ತಲೆಮಾರಿನ ಚಿತ್ರಗಳ ಯಶಸ್ಸನ್ನು ತೆಗೆದುಕೊಂಡರೆ ಮುಖ್ಯವಾಗಿ ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳು ಯಶಸ್ವಿಯಾಗಿದ್ದು ಹೆಚ್ಚು ಎನ್ನುತ್ತಾರೆ ಹರಿಪ್ರಿಯಾ.
ಈ ಚಿತ್ರದ ಮೂಲಕ ಹರಿಪ್ರಿಯಾ ಸ್ನೇಹಿತರ ಸಲಹೆಯಂತೆ ನಾಟಕಗಳನ್ನು ನೋಡಲು ಆರಂಭಿಸಿದರಂತೆ.ನಾನು ಥಿಯೇಟರ್ ನ್ನು ಪ್ರೀತಿಸುವವಳು, ಹೀಗಾಗಿಯೇ ಈ ಚಿತ್ರ ಒಪ್ಪಿಕೊಂಡೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡುವಂತೆ ಸ್ನೇಹಿತರು ಹೇಳಿದರು. ನಾಟಕಗಳಲ್ಲಿ ಕಲಾವಿದರಿಗೆ ಆರಂಭದಿಂದ ಕೊನೆಯ ತನಕವೂ ಎನರ್ಜಿ ಇರುತ್ತದೆ. ಅವರು ಪಾತ್ರದಲ್ಲಿ ಲೀನವಾಗುವುದು ಮತ್ತು ಅವರ ನೆನಪು ಶಕ್ತಿ ಅಗಾಧ. ನಾನು ಕೂಡ ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಅಂದುಕೊಂಡದ್ದಿದೆ.
ಸೂಜಿದಾರ ಚಿತ್ರದ ನಿರ್ದೇಶಕರು ಮತ್ತು ಕಲಾವಿದರು ರಂಗಭೂಮಿ ಹಿನ್ನಲೆಯವರು. ತಮ್ಮ ಗುರುತನ್ನು ಕಂಡುಕೊಳ್ಳುವ ವಾಸ್ತವ ಚಿತ್ರ ಇದಾಗಿದ್ದು ಅಚ್ಯುತ್ ಕುಮಾರ್ ಮತ್ತು ಸುಚೇಂದ್ರ ಪ್ರಸಾದ್ ರಂಥಹ ಕಲಾವಿದರ ಜೊತೆ ನಟಿಸಿದ್ದು ಅದ್ಭುತ ಅನುಭವ ಸಿಕ್ಕಿತು. ಈ ಚಿತ್ರದ ಮೂಲಕ ನಾನು ಮತ್ತೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ ಎನ್ನುವ ಭರವಸೆಯಿದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos