`ಸೂಜಿದಾರ’ ಪೋಣಿಸಿದ ಹರಿಪ್ರಿಯಾ ಗರಂ ಆಗಿದ್ದೇಕೆ?
ಬೆಂಗಳೂರು: ಚಂದನವನದ ಚಂದದ ನಟಿ ಹರಿಪ್ರಿಯಾ, ತಮ್ಮದೇ ನಟನೆಯ `ಸೂಜಿದಾರ’ ಚಿತ್ರ ವೀಕ್ಷಣೆಯ ಬಳಿಕ ಗರಂ ಆಗಿದ್ದಾರೆ. ಬಹುನೀರೀಕ್ಷೆ ಹಾಗೂ ಕುತೂಹಲ ಮೂಡಿಸಿದ್ದ ಚಿತ್ರ ಅಷ್ಟೇನೂ ಚೆನ್ನಾಗಿಲ್ಲ ಎಂದು ಸ್ವತಃ ಅವರೇ ಹೇಳಿದ್ದು, ವೀಕ್ಷಕರ ಕ್ಷಮೆ ಯಾಚಿಸಿದ್ದಾರೆ.
ಇದೇ 24ರಂದು ತೆರೆ ಕಾಣಲಿರುವ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಯುಎನ್ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಹರಿಪ್ರಿಯಾ ಸೂಜಿದಾರ ಚಿತ್ರದ ಕುರಿತು ಬೇಸರ ವ್ಯಕ್ತಪಡಿಸಿದರು.
“ನಿರ್ದೇಶಕರು ಹೇಳಿದ ಕಥೆಯೇ ಬೇರೆ, ಚಿತ್ರದಲ್ಲಿ ಮೂಡಿಬಂದಿರುವ ಕಥೆಯೇ ಬೇರೆ. ಅಂದುಕೊಂಡಂತೆ ಸಿನಿಮಾ ಚಿತ್ರೀಕರಣಗೊಂಡಿಲ್ಲ. ಹೀಗೆ ಮಾಡುವುದಾದಲ್ಲಿ, ಕಥೆ ಹೇಳುವ ಅಗತ್ಯವೇನು? ಜೊತೆಗೆ ನಿರ್ಮಾಪಕರ ಪಾಡೇನು? ಚಿತ್ರ ವೀಕ್ಷಣೆಯ ನಂತರ ಮನದಲ್ಲಿ ಮೂಡಿದ ಬೇಸರವನ್ನು ಜಾಲತಾಣದ ಮೂಲಕ ಹೊರ ಹಾಕಿರುವೆ” ಎಂದರು.
‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಗಾದೆಯಂತೆ ತಾವು ನಟಿಸಿರುವ ಚಿತ್ರ ಹೇಗೇ ಇರಲಿ, ಚೆನ್ನಾಗಿದೆ ಎಂದೇ ಎಲ್ಲ ನಟ, ನಟಿಯರೂ ಹೇಳಿಕೊಳ್ಳುತ್ತಾರೆ. ಆದರೆ ‘ಚೆನ್ನಾಗಿಲ್ಲ’ ಎಂದು ಹೇಳಿದ ಕನ್ನಡದ ನಟಿಯರಲ್ಲಿ ಬಹುಶ: ಕನ್ನಡದ ಹರಿಪ್ರಿಯಾ ಅವರೇ ಮೊದಲಿಗರು ಎನ್ನಬಹುದು.
ಕಳಪೆ ಚಿತ್ರ ನೀಡಿದ್ದಕ್ಕಾಗಿ ಕ್ಷಮೆ ಯಾಚಿಸಿರುವ ಹರಿಪ್ರಿಯಾ, ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
‘ಹಾಯ್, ನಾನು ಮೊದಲೇ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಯಾವಾಗಲೂ ಸಹ ಚಿತ್ರದ ಬಗೆಗೆ ಅಭಿಮಾನಿಗಳೊಂದಿಗೆ ಮಾತನಾಡುವಾಗ ಅವರ ಮಾತು ನನ್ನನ್ನು ಚಿಂತೆಗೀಡು ಮಾಡುತ್ತದೆ. ಸೂಜಿದಾರ ಚಿತ್ರದಲ್ಲಿ ನನ್ನಿಂದ ಆಭಿಮಾನಿಗಳು ಹೆಚ್ಚು ನಿರೀಕ್ಷೆ ಮಾಡಿದ್ದರು. ಆದರೆ ಅವರು ನಿರೀಕ್ಷಿಸಿದ ಮಟ್ಟಿಗೆ ಚಿತ್ರವು ಮೂಡಿಬಂದಿಲ್ಲ. ಹೀಗಾಗಿ ಥಿಯೇಟರ್ ನಿಂದ ಚಿತ್ರದ ಮಧ್ಯದಲ್ಲಿಯೆ ಜನ ಎದ್ದು ಹೊರ ನಡೆದಿದ್ದಾರೆ. ಆದರೆ ನಾನು ನಿಜ ಹೇಳುತ್ತೇನೆ. ನಿರ್ದೇಶಕರು ಚಿತ್ರದ ಕಥೆಯನ್ನು ಹೇಳಿದ್ದೆ ಬೇರೆ ರೀತಿ. ನಂತರ ಅನಾವಶ್ಯಕ ಕಥೆಯನ್ನು ಬದಲಾಯಿಸಿದ್ದಾರೆ. ನನಗೂ ಚಿತ್ರ ನೋಡಿದಾಗ ನಿರಾಸೆಯಾಗಿದೆ. ಅದಕ್ಕಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಇನ್ನೂ ಮುಂದೆ ಎಂದಿಗೂ ಈ ರೀತಿ ರಿಪೀಟ್ ಆಗುವುದಿಲ್ಲ. ಮುಂಬರುವ ಸಿನಿಮಾಗಳಲ್ಲಿ ನಿಮಗೆ ಮನರಂಜನೆ ನೀಡುತ್ತೇನೆ” ಎಂದು ತಮ್ಮ ಇನ್ ಸ್ಟಾ ಗ್ರಾಮ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos