ಸಿನಿಮಾ ಸುದ್ದಿ

'ಸಿಲ್ಲಿ ಲಲ್ಲಿ' ಹಾಸ್ಯ ಧಾರಾವಾಹಿ ಮೇ 20ರಿಂದ ಕಲರ್ಸ್ ಸೂಪರ್ ನಲ್ಲಿ ರಾತ್ರಿ 9 ಗಂಟೆಗೆ

Prasad SN
ಹತ್ತು ವರ್ಷಗಳ ಹಿಂದೆ ಹಾಸ್ಯಪ್ರಿಯರನ್ನಾಗಿಸಿ ಯಶಸ್ವಿಯಾಗಿ 1162 ಕಂತುಗಳನ್ನು ಪೂರೈಸಿದ 'ಸಿಲ್ಲಿ ಲಲ್ಲಿ' ಮತ್ತೆ ಕಿರುತೆರೆಯ ಮೇಲೆ ಮೇ 20 ರಿಂದ ರಾತ್ರಿ 9.00 ಗಂಟೆಗೆ ಕಲರ್ಸ್ ಸೂಪರ್ ಚಾನಲ್‍ನಲ್ಲಿ ಪ್ರಸಾರವಾಗಲಿದೆ.
ದಿನಕ್ಕೆ ಒಂದು ಕತೆಯಂತೆ ವಿವಿಧ ಘಟನೆಗಳ ಮೂಲಕ ರಂಜಿಸುವ 'ಸಿಲ್ಲಿ ಲಲ್ಲಿ' ಈ ಮೊದಲು ಪ್ರಸಾರವಾದಾಗ ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಇಲ್ಲಿ ಇರುವ ಪಾತ್ರಗಳು ಒಟ್ಟು ಒಂಭತ್ತು. ಇವರನ್ನ ನವರತ್ನಗಳು ಎನ್ನಿ, ನವಗ್ರಹಗಳು ಎನ್ನಿ ಅಥವಾ ನವರಸಗಳನ್ನು ನೀಡುವ ಕಲಾವಿದರು ಎನ್ನಿ.
ಇಲ್ಲಿ ಮುಖ್ಯ ಪಾತ್ರ ಡಾ. ವಿಠಲ್‍ರಾವ್ ಎಂ.ಬಿ.ಬಿ.ಎಸ್. ಇವರ ಕ್ಲಿನಿಕ್‍ಗೆ ಯಾರೇ ಬಂದರೂ ಡಾಕ್ಟರ್ ಕೇಳುವುದು  'ಐ ಆ್ಯಮ್ ವಿಠಲ್‍ ರಾವ್ ಫೇಮಸ್‍ ಇನ್ ಸರ್ಜರಿ ಅಂಡ್ ಭರ್ಜರಿ, ವಾಟ್ಸ್‍ ಯುವರ್ ಪ್ರಾಬ್ಲಂ? ಓಪನ್‍ ಯುವರ್ ಮೌತ್‍ ಅಂಡ್ ಷೋ ಮೀ ಯುವರ್ ಲಾಂಗ್‍ಟಂಗ್ !' ಇದು ಮ್ಯಾನರಿಸಂ ಡೈಲಾಗ್‍. ಕಂತೆಗೆ ತಕ್ಕ ಬೊಂತೆ ಎಂಬಂತೆ ಕಾಂಪೌಂಡರ್ ಗೋವಿಂದ 'ಅರ್ಥವಾಯ್ತು' ಎನ್ನುತ್ತಾ ಡಾಕ್ಟರ್ ಪರಿಸ್ಥಿತಿಯನ್ನ, ರೋಗಿಗಳ ಗ್ರಹಚಾರವನ್ನ ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿರುತ್ತಾನೆ.
ಇನ್ನು ನರ್ಸ್ ಮೈಡ್ ಲಲ್ತಾಗೆ ಮನೆಯಲ್ಲೂ ಕೆಲಸ, ಕ್ಲಿನಿಕ್‍ನಲ್ಲೂ ಕೆಲಸ. ಈಕೆ ಸಹಾಯಕಿ. ಡಾಕ್ಟರ್ ಸ್ಟೆಥಾಸ್ಕೋಪ್ ಮೇಲಿರುವ ಧೂಳನ್ನು ಒರೆಸಿ ಕೊಡುವವಳು ಇವಳೇ. ಮನೆಯಲ್ಲಿ ಯಜಮಾನಮ್ಮ ಇದ್ದಾಳೆ. ಹೆಸರು ಲಲಿತಾಂಬ. 'ಲಲ್ತಾ' ಅಂತ ಡಾಕ್ಟರ್ ಕರೆದಾಗ ಮನೆ ಯಜಮಾನಿ ಲಲ್ತಾ ಜೊತೆಗೆ 'ಎನ್ನೆಮ್ಮೆಲ್' ಸಹ ಓಗೊಡುತ್ತಾಳೆ. ಇಬ್ಬರದೂ ಒಂದೇ ಹೆಸರು. ಹೆಸರಿನ ಕನ್‍ಫ್ಯೂಷನ್ನಲ್ಲಿ ಡಾಕ್ಟರ್‍ಗೆ ಸಿಟ್ಟು ಬಂದು ಇದರಿಂದ ಇತರರಿಗೆ ತೊಂದರೆಯಾಗುತ್ತದೆ.
ಇನ್ನು ಕೆಲಸಕ್ಕೋಸ್ಕರ ಪರದಾಡುತ್ತಿರುವ ಸೋದರ `ಪಲ್ಲಿ’ ಕಾದಂಬರಿಯನ್ನು ಬರೆಯುವ ಹುಚ್ಚಿರುವ ಸೋದರಿ 'ಸಿಲ್ಲಿ' ವಿಚಿತ್ರರೀತಿಯಲ್ಲಿ ಹಾಸ್ಯವನ್ನ ನೀಡುತ್ತಾರೆ. ನೆರೆಮನೆಯ ದಂಪತಿಗಳಾದ 'ರಂಗನಾಥ್‍ ಮತ್ತು ವಿಶಾಲು' ಡಾಕ್ಟರ್ ಮೇಲೆ ಪ್ಯಾರಾಸೈಟುಗಳಾಗಿ ಬದುಕುತ್ತಿದ್ದಾರೆ. ಯಾವುದೇ ಕೆಲಸವನ್ನು ವಹಿಸಿದರೂ 'ಒಂದಿಷ್ಟು ಹಣಕೊಡಿ, ಎಲ್ಲಾ ನಾನು ಮಾಡ್ತೀನಿ' ಎನ್ನುತ್ತಾನೆ ರಂಗನಾಥ. ಲಲ್ತಾ ಮೇಡಂ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾಡಿದರೂ 'ಚಪ್ಪಾಳೆ' ಎಂದು ಸಭಿಕರನ್ನು ವಿಶಾಲು ಹುರಿದುಂಬಿಸುತ್ತಾಳೆ. ಇವರಿಗೆ ಇರುವ ಬೆಪ್ಪು ಮಗಳಾದ ಗುಡ್ ಫಾರ್ ನಥಿಂಗ್ 'ಸೂಜಿ' ಇವಿಷ್ಟು ಪಾತ್ರಗಳು ಪ್ರಮುಖವಾಗಿವೆ.
ಸಿಹಿಕಹಿ ಚಂದ್ರು ಅವರು ನಿರ್ದೇಶಿಸುತ್ತಿರುವ ಈ ಸುಂದರ ಹಾಸ್ಯ ಧಾರಾವಾಹಿಗೆ ಎಂ.ಎಸ್. ನರಸಿಂಹಮೂರ್ತಿ ಕಚಗುಳಿ ಇಡುವ ಸಂಭಾಷಣೆಯನ್ನು ಬರೆದಿದ್ದಾರೆ.
SCROLL FOR NEXT