ಸಿನಿಮಾ ಸುದ್ದಿ

'ಜಯಲಲಿತಾ' ಜೀವನ ಆಧಾರಿತ ಚಿತ್ರ: ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ

Lingaraj Badiger

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಜೀವನ ಆಧಾರಿತ ಚಿತ್ರದಲ್ಲಿ ರೋಜಾ ಚಿತ್ರದ ಖ್ಯಾತಿಯ ಅರವಿಂದ್ ಸ್ವಾಮಿ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ ತಮಿಳಿನಲ್ಲಿ ‘ತಲೈವಿ’ ಹಾಗೂ ಹಿಂದಿಯಲ್ಲಿ 'ಜಯಾ'  ಶೀರ್ಷಿಕೆಯ ಈ ಚಿತ್ರಕ್ಕೆ ನಿರ್ದೇಶಕ ಎ.ಎಲ್. ವಿಜಯ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ.

ಬಹುಭಾಷೆಯಲ್ಲಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಜಯಲಲಿತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ನಟ ಹಾಗೂ ರಾಜಕಾರಣಿ ರಾಮಚಂದ್ರನ್ ಅವರು ತಮಿಳುನಾಡಿನಲ್ಲಿ ಎಂಜಿಆರ್ ಎಂದೇ ಖ್ಯಾತಿ ಪಡೆದಿದ್ದು, 1972ರಲ್ಲಿ ಡಿಎಂಕೆ ತೊರೆದು ಎಐಎಡಿಎಂಕೆ ಸ್ಥಾಪಿಸಿದ್ದರು. 

ಜಯಲಲಿತಾ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅರವಿಂದ್ ಸ್ವಾಮಿ ಬಣ್ಣ ಹಚ್ಚುವುದು ಖಚಿತವಾಗಿದೆ. ಜಯಲಲಿತಾ ಬದುಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ನಿಭಾಯಿಸಿದ ಪಾತ್ರ ಬಹಳ ಪ್ರಮುಖವಾದದ್ದು. ಹಾಗಾಗಿ, ‘ತಲೈವಿ’ಯಲ್ಲೂ ಅವರ ಪಾತ್ರ ಬರಲಿದೆ. ಅದಕ್ಕಾಗಿ ಎಂಜಿಆರ್ ಪಾತ್ರಕ್ಕೆ ಅರವಿಂದ್ ಆಯ್ಕೆಯಾಗಿದ್ದಾರೆ.

1965 ರಿಂದ 1973 ರವರೆಗೆ ಜಯಲಲಿತಾ ಮತ್ತು ಎಂಜಿ ರಾಮಚಂದ್ರನ್ ಅವರು 28ಕ್ಕೂ ಅಧಿಕ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದರು. ನಂತರ ಎಂಜಿಆರ್ ತಮಿಳುನಾಡಿನ ರಾಜಕೀಯ ಪ್ರವೇಶ ಮಾಡಿ ಮುಖ್ಯಮಂತ್ರಿಯಾಗಿಯೂ ಜನಪ್ರಿಯತೆ ಗಳಿಸಿದ್ದರು.

ನವೆಂಬರ್ ಮೊದಲ ವಾರದಲ್ಲಿ ಅರಮನೆ ನಗರಿ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಆರಂಭದಲ್ಲಿ ಕಂಗನಾ ಅವರ ಪಾತ್ರದ ಶೂಟಿಂಗ್ ನಡೆಯಲಿದ್ದು, ನವೆಂಬರ್ 15 ರ ನಂತರ ಅರವಿಂದ್ ಸ್ವಾಮಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ.

SCROLL FOR NEXT