ಸಿನಿಮಾ ಸುದ್ದಿ

ಕೊರೋನಾ: ಪೊಲೀಸರ ಕಾರ್ಯವೈಖರಿ ಕುರಿತು ಯೋಗರಾಜ್ ಭಟ್ಟರಿಂದ ಸಾಕ್ಷ್ಯಚಿತ್ರ

Lingaraj Badiger

ಬೆಂಗಳೂರು: ಕೊರೋನಾ ವೈರಸ್ ಬಿಕ್ಕಟ್ಟು ಆರಂಭವಾದ ದಿನದಿಂದಲೂ ಜನರನ್ನು ನಿಯಂತ್ರಿಸುವ ಕಾರ್ಯದಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಲಾಕ್ ಡೌನ್ ಇದ್ದರೂ ಮನೆಯಿಂದ ಹೊರಗೆ ಬರುವ ಮಂದಿ, ಸುರಕ್ಷಿತವಾಗಿರಿ ಎಂದು ಬುದ್ಧಿ ಹೇಳಿದರೂ ಹರಿಹಾಯುವ ಜನರು, ದಾಳಿ ನಡೆಸುವ ಪುಂಡರು ಹೀಗೆ . . . ಇಂತಹ ಹಲವು ಸವಾಲುಗಳನ್ನು ಎದುರಿಸುವ ಅವರ ಕಾರ್ಯವೈಖರಿ ಸಾಕ್ಷ್ಯಚಿತ್ರದ ರೂಪದಲ್ಲಿ ದಾಖಲಾಗಲಿದೆ.

ನಗರದ ಟೌನ್‌ಹಾಲ್ ಎದುರು ಯೋಗರಾಜ್ ಭಟ್ಟರು, ಕೆಲವು ಪೊಲೀಸರನ್ನು ಸೇರಿಸಿಕೊಂಡು ಚಿತ್ರೀಕರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಗುರುತಿಸುವ ಚಿತ್ರ ಇದಾಗಿದೆ.

"ಚಿತ್ರೀಕರಣಕ್ಕೆ ಅವಕಾಶ ಕೊಡಲಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಪೊಲೀಸರ ಕಾರ್ಯವನ್ನು ಗುರುತಿಸುವ, ದಾಖಲಿಸುವ ಕಾರ್ಯವನ್ನು ಯೋಗರಾಜ್ ಭಟ್ಟರು ಮಾಡುತ್ತಿದ್ದಾರೆ" ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಈ ಹಿಂದೆ ಯೋಗರಾಜ್ ಭಟ್ಟರು ಚುನಾವಣಾ ಆಯೋಗದ ಮನವಿ ಮೇರೆಗೆ ಚುನಾವಣೆ ಗೀತಚಿತ್ರಗಳನ್ನು, ಕೆಲವು ಕಿರುಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಲಾಕ್‌ಡೌನ್ ಗೆ ಮುನ್ನ ಗಣೇಶ್, ಪವನ್, ದಿಗಂತ್ ಅಭಿನಯದ ಗಾಳಿಪಟ-2 ಸಿನಿಮಾ ನಿರ್ದೇಶನದಲ್ಲಿ ಭಟ್ಟರು ತೊಡಗಿಸಿಕೊಂಡಿದ್ದರು.

SCROLL FOR NEXT