ಮುಂಬೈ: ಬಾಹುಬಲಿ ಸಿನಿಮಾದ ಬಹಳ ದೊಡ್ಡ ಯಶಸ್ಸಿನ ನಂತರ ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಮುಂದಿನ ಸಿನಿಮಾ ಆರ್ ಆರ್ ಆರ್ ಕೂಡ ಅಷ್ಟೇ ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ವಿತರಣೆ ಹಕ್ಕುಗಳು ದಕ್ಷಿಣ ಭಾರತದಲ್ಲಿ ಈಗಾಗಲೇ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.
ಆರ್ ಆರ್ ಆರ್ ಚಿತ್ರದ ಬಿಡುಗಡೆ ಪೂರ್ವ ವಹಿವಾಟು ಈಗಾಗಲೇ ಬಾಹುಬಲಿ2 ಬಿಡುಗಡೆ ಪೂರ್ವ ವಹಿವಾಟನ್ನು ಹಿಂದಿಕ್ಕಿದೆ. ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿಯೇ 215 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇನ್ನು ಕರ್ನಾಟಕದ ಚಿತ್ರ ಬಿಡುಗಡೆ ಹಕ್ಕು 50 ಕೋಟಿಗೆ ಮತ್ತು ಸಾಗರೋತ್ತರ ಮಾರಾಟ ಹಕ್ಕು 70 ಕೋಟಿಗೆ ಮಾರಾಟವಾಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ ದಕ್ಷಿಣ ಭಾರತ ಮತ್ತು ಸಾಗರೋತ್ತರಗಳಲ್ಲಿ ಸುಮಾರು 400 ಕೋಟಿ ರೂಪಾಯಿ ಸಂಗ್ರಹಿಸಲಿದೆ ಎಂದು ಚಿತ್ರ ವಿತರಕ ವಿಶ್ಲೇಷಕ ಕೋಮಲ್ ನಹ್ತಾ ಟ್ವೀಟ್ ಮಾಡಿದ್ದಾರೆ.
ಬಾಹುಬಲಿ ಮೂಲಕ ಈಗಾಗಲೇ ರಾಜಮೌಳಿ ಇಡೀ ಭಾರತದಾದ್ಯಂತ ಜನಪ್ರಿಯರಾಗಿದ್ದಾರೆ. ಉತ್ತರ ಭಾರತ ಮಾರುಕಟ್ಟೆಯನ್ನು ಲಗ್ಗೆಯಿಡಲು ಸಹ ಚಿತ್ರ ನಿರ್ಮಾಪಕರು ಕಣ್ಣಿಟ್ಟಿದ್ದು ಇದಕ್ಕಾಗಿ ಬಾಲಿವುಡ್ ನ ಖ್ಯಾತ ನಟರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅವರನ್ನು ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ ತೆಲುಗಿನ ಸೂಪರ್ ಸ್ಟಾರ್ ಗಳಾದ ಜ್ಯೂನಿಯರ್ ಎನ್ ಟಿಆರ್, ರಾಮ್ ಚರಣ್ ಅಭಿನಯಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಒಲಿವಿಯಾ ಮೊರ್ರಿಸ್, ಅಲಿಸನ್ ಡೂಡಿ ಮತ್ತು ರೇ ಸ್ಟೆವೆನ್ಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಮುಂದಿನ ವರ್ಷ ಜನವರಿ 8ರಂದು 10 ಭಾರತೀಯ ಭಾಷೆಗಳಲ್ಲಿ ತೆರೆ ಕಾಣಲಿರುವ ಆರ್ ಆರ್ ಆರ್ ಭಾರತದಲ್ಲಿ ಇದುವರೆಗೆ ತಯಾರಾದ ಅತಿ ದುಬಾರಿ ಬಜೆಟ್ ಚಿತ್ರಗಳಲ್ಲಿ ಒಂದಾಗಿದೆ.