ಸಿನಿಮಾ ಸುದ್ದಿ

ಕಮಲಿ ಧಾರಾವಾಹಿ ನಿರ್ದೇಶಕ ಅರವಿಂದ ಕೌಶಿಕ್ ವಿರುದ್ಧ ದೂರು ದಾಖಲು

Nagaraja AB

ಬೆಂಗಳೂರು:  ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ  'ಕಮಲಿ' ಧಾರಾವಾಹಿ ನಿರ್ಮಾಪಕ ರೋಹಿತ್ ತಮಗೆ ವಂಚನೆಯಾಗಿದೆ ಎಂದು‌ ಆರೋಪಿಸಿ ನಿರ್ದೇಶಕರ ವಿರುದ್ಧ  ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದಾರೆ.

ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್, ಶಿಲ್ಪಾ ಕೌಶಿಕ್ ಮತ್ತು ನವೀನ್ ಸಾಗರ್ ಎಂಬುವವರ ವಿರುದ್ಧ  ರೋಹಿತ್ ದೂರು ದಾಖಲಿಸಿದ್ದಾರೆ. ಸತ್ವ ಮೀಡಿಯಾ ಸಂಸ್ಥೆಯಡಿ ನಿರ್ಮಾಣಗೊಳ್ಳುತ್ತಿರುವ ಕಮಲಿ ಧಾರಾವಾಹಿಗೆ ತಾವು 73 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದು, ಹೂಡಿಕೆಯ ನಂತರ ಬಂದ ಲಾಭಾಂಶ ಹಾಗೂ ಬಂಡವಾಳವನ್ನು ತಮಗೆ ವಾಪಾಸ್ಸು ನೀಡಿಲ್ಲ ಎಂದು ರೋಹಿತ್ ಆರೋಪಿಸಿದ್ದಾರೆ.

ಕಳೆದ 2018ರ ಮೇ 28ರಂದು 'ಕಮಲಿ' ಧಾರಾವಾಹಿ ಆರಂಭವಾಗಿತ್ತು. ಸುಮಾರು 287 ಸಂಚಿಕೆಗಳು ಪ್ರಸಾರವಾಗುವವರೆಗೂ ರೋಹಿತ್ ಅವರನ್ನು ನಿರ್ಮಾಪಕನೆಂದು ತೋರಿಸಲಾಗಿತ್ತು. ಆದರೆ, ನಂತರ ಧಾರಾವಾಹಿಯ ಟೈಟಲ್ ಕಾರ್ಡ್​ನಿಂದ ರೋಹಿತ್ ಅವರ ಹೆಸರನ್ನು ತೆಗೆದು ಹಾಕಲಾಗಿತ್ತು ಎನ್ನಲಾಗಿದೆ.

ಧಾರಾವಾಹಿಯ ನಿರ್ದೇಶಕ ಅರವಿಂದ್ ಕೌಶಿಕ್ ತಮ್ಮ ಪತ್ನಿ ಶಿಲ್ಪಾ ಹೆಸರಿನಲ್ಲಿ ಸತ್ವ ಮೀಡಿಯಾ ಬ್ಯಾನರ್​ನಡಿ ಧಾರಾವಾಹಿ ನಿರ್ಮಿಸಿದ್ದು, ಈ ಸಂಬಂಧ ಖಾಸಗಿ ಚಾನೆಲ್ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.

ಈ ಮೂಲಕ ಅರವಿಂದ್ ಕೌಶಿಕ್, ಆತನ ಪತ್ನಿ ಶಿಲ್ಪಾ, ಹಾಗೂ ನವೀನ್ ಸಾಗರ್ ಎಂಬುವವರು ಸೇರಿಕೊಂಡು ಧಾರಾವಾಹಿಯಿಂದ ಬಂದ ಎಲ್ಲ ಲಾಭಾಂಶವನ್ನು ತಾವೇ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 73 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದ ತಮಗೆ ಅತ್ಯಂತ ವ್ಯವಸ್ಥಿತವಾಗಿ ವಂಚನೆಯಾಗಿದೆ ಎಂದು ರೋಹಿತ್ ಆರೋಪಿಸಿದ್ದಾರೆ.

ಈ ಸಂಗತಿಯನ್ನು ದಾರವಾಹಿ ಪ್ರಸಾರವಾಗುವ ವಾಹಿನಿ ಗಮನಕ್ಕೂ ತಂದಿದ್ದೆ. ಆದರೆ, ವಾಹಿನಿ ನಿರ್ದೇಶಕರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ರೋಹಿತ್ ದೂರಿದ್ದಾರೆ.

SCROLL FOR NEXT