ಬೆಂಗಳೂರು: ಕನ್ನಡದ ಮುಂಬರುವ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿನೆಮಾ ದರ್ಶನ್ ಅವರ ರಾಬರ್ಟ್. ಕೊರೋನಾ ಹಾವಳಿಯಿಲ್ಲದಿರುತ್ತಿದ್ದರೆ ಕಳೆದ ಏಪ್ರಿಲ್ 9ಕ್ಕೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಕೊರೋನಾ ಬಂದು ರಾಬರ್ಟ್ ಚಿತ್ರದ ಕೆಲಸಗಳೆಲ್ಲವೂ ಮುಂದೆ ಹೋಯಿತು.
ದರ್ಶನ್ ಅಭಿಮಾನಿಗಳು ಸಹಜವಾಗಿ ಬೇಸರಗೊಂಡಿದ್ದರು. ಅಭಿಮಾನಿಗಳ ಕೋರಿಕೆಯಂತೆ ಹಾಡು, ಪೋಸ್ಟರ್ಗಳು ಬಿಡುಗಡೆ ಆದವು. ಇದೀಗ ಮತ್ತೊಂದು ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ದರ್ಶನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.
ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ರಾಬರ್ಟ್ ತಂಡದಿಂದ ಹೊಸ ಪೊಸ್ಟರ್ ಬಿಡುಗಡೆಯಾಗಿದ್ದು, ಕೈಯಲ್ಲಿ ಗಿಟಾರ್ ಹಿಡಿದ ಭಂಗಿಯಲ್ಲಿ ದರ್ಶನ್ ಕಾಣಿಸಿಕೊಂಡು, ಪೋಸ್ಟರ್ ಮೂಲಕ ನಿರ್ಮಾಪಕರಿಗೆ ಶುಭಾಶಯ ಕೋರಿದೆ ಚಿತ್ರತಂಡ.