ಸಿನಿಮಾ ಸುದ್ದಿ

ಬೆಂಗಳೂರು ನಾಗರತ್ಮಮ್ಮ ಜೀವನಾಧಾರಿತ ಚಿತ್ರ ತೆರೆಗೆ, ನಾಗಾಭರಣ ಸಿದ್ಧತೆ!

Nagaraja AB

ಬೆಂಗಳೂರು: ಕರ್ನಾಟಕ ಸಂಗೀತ ಹಾಡುಗಾರ್ತಿ, ಸಾಂಸ್ಕೃತಿಕ ಹೋರಾಟಗಾರ್ತಿ ಮತ್ತು ವಿದುಷಿ ಬೆಂಗಳೂರು ನಾಗರತ್ನಮ್ಮ ಅವರ ಜೀವನಾಧಾರಿತ ಚಿತ್ರವನ್ನು ತೆರೆಗೆ ತರಲು ರಂಗಕರ್ಮಿ ಮತ್ತು ಚಿತ್ರ ನಿರ್ದೇಶಕ ಟಿಎಸ್ ನಾಗಾಭರಣ ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರು ನಾಗರತ್ನಮ್ಮ ಜೀವನವನ್ನಾಧರಿಸಿದ ನಾಟಕ ಈಗಾಗಲೇ ಪ್ರದರ್ಶನ ಕಂಡಿದ್ದು, ವಿದ್ಯಾ ಸುಂದರಿ ಬೆಂಗಳೂರು ನಾಗರತ್ಮಮ್ಮ ಶೀರ್ಷಿಕೆಯನ್ನಿಟ್ಟುಕೊಂಡು ಚಿತ್ರದ ಕಥೆಯನ್ನು ಟಿಎಸ್ ನಾಗಾಭರಣ ಸಿದ್ಧಪಡುತ್ತಿದ್ದಾರೆ. 

ಈ ಕುರಿತಂತೆ ಮಾತನಾಡಿದ ಟಿಎಸ್ ನಾಗಾಭರಣ, 2007ರಲ್ಲಿ ವಿ. ಶ್ರೀರಾಮ್ ಬರೆದಿರುವ ದೇವದಾಸ್ ಮತ್ತು ಸೇಂಟ್ ಪುಸ್ತಕದ ಮೂಲಕ ಬೆಂಗಳೂರು ನಾಗರತ್ಮಮ್ಮ ಬಗ್ಗೆ 2009ರಲ್ಲಿ ತಿಳಿದುಕೊಂಡಿದ್ದು, ಆ ವಿಷಯವನ್ನಿಟ್ಟು ಕೊಂಡು ಕೆಲಸ ಆರಂಭಿಸಿದೆ. ಆಕೆಯ  ಜೀವನದ ಬಗ್ಗೆ ಓದಿದ ನಂತರ, ಅದನ್ನು ಚಲನಚಿತ್ರವನ್ನಾಗಿ ಮಾಡಲು ಅದ್ಭುತವಾದ ವಸ್ತುವನ್ನು ಕಂಡುಕೊಂಡೆ. ಆದರೆ, ನಿರ್ಮಾಪಕರು ಸಿಗಲಿಲ್ಲ, ಆದ್ದರಿಂದ ನಾಟಕ ಮಾಡಲು ನಿರ್ಧರಿಸಿದೆ. ಅದು ಕಳೆದ ವರ್ಷ 10 ಬಾರಿ ಪ್ರದರ್ಶನ ಕಂಡಿದೆ. ಈ ನಾಟಕ ಬಗ್ಗೆ ಕೆಲ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರ ನಿರ್ದೇಶಿಸುವಂತೆ ಪ್ರೇರೆಪಿಸಿದರು ಎಂದು ವಿವರಿಸಿದರು. 

ಕನ್ನಡದಲ್ಲಿ ಬೆಂಗಳೂರು ನಾಗರತ್ನಮ್ಮ ಚಿತ್ರ ಮಾಡಲು ಸಿದ್ಧತೆ ನಡೆಸಿರುವ ಟಿಎಸ್ ನಾಗಾಭರಣ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಸದ್ಯ ಅವರು ಸ್ಕ್ರಿಪ್ಟ್ ನ 13ನೇ ಆವೃತ್ತಿಯ ತಯಾರಿಕೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅದನ್ನು ಮತ್ತಷ್ಟು ಉತ್ತಮಗೊಳಿಸುತ್ತಿರುವುದಾಗಿ  ಹೇಳಿದರು. 

1878ರಲ್ಲಿ ನಂಜನಗೂಡಿನಲ್ಲಿ ಜನಿಸಿದ ನಾಗರತ್ನಮ್ಮ 1952ರಲ್ಲಿ ತಿರುವೈಯೂರಿನಲ್ಲಿ ಮೃತಪಡುತ್ತಾರೆ. ಆಕೆಯ ಜೀವಿತಾವಧಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕರ್ನಾಟಿಕ್ ಸಂಗೀತದಿಂದಾಗಿ ಹೆಸರಾಗಿದ್ದ ನಾಗರತ್ನಮ್ಮ, ಆ ಕಾಲದಲ್ಲಿಯೇ ಮದ್ರಾಸ್ ರೆಸಿಡೆನ್ಸಿಗೆ ಆದಾಯ ತೆರಿಗೆ ಪಾವತಿಸಿದ ಮೊದಲ ಮಹಿಳೆ ಎಂಬುದನ್ನು ಓದಿ ತಿಳಿದಿರುವುದಾಗಿ ಹೇಳಿದ ನಾಗಾಭರಣ, ಆಕೆಯ ಕೆಲಸಗಳು ಹಾಗೂ ಸಾಧನೆಗಳ ಬಗ್ಗೆ ಚಿತ್ರದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಥೆಯೇ ನನ್ನ ಹಿರೋ ಆಗಿದ್ದು, ಪಾತ್ರಕ್ಕೆ ಸರಿಹೊಂದುವ ನಟರಿಗಾಗಿ ಕಾಯುತ್ತಿದ್ದು, ನನ್ನ ಮನಸಿನಲ್ಲಿ ಕೆಲ ಆಯ್ಕೆಗಳಿವೆ. ಚಿತ್ರಕ್ಕೆ ಬದ್ಧರಾಗಿರುವ ಸಂಗೀತ ನಿರ್ದೇಶಕರನ್ನು ಅಂತಿಮಗೊಳಿಸುತ್ತೇನೆ. ಡಿಸೆಂಬರ್ ಅಂತ್ಯದೊಳಗೆ ಪಾತ್ರಾದಾರಿಗಳ ಪ್ರಕ್ರಿಯೆಯನ್ನೂ ಪೂರ್ಣಗೊಳಿಸುತ್ತೇವೆ. 2021ರಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಾಗಾಭರಣ ಹೇಳಿದರು.

ಈ ಮಧ್ಯೆ  ಜೂನ್ 7 ರಂದು ಸಂಜೆ 7-30ಕ್ಕೆ ಬೆನಕ ಥಿಯೇಟರ್ ಗ್ರೂಫ್ ವೆಬ್ ಪೇಜ್ ಮೂಲಕ ಆನ್ ಲೈನ್ ನಲ್ಲಿ ನಾಟಕವನ್ನು ವೀಕ್ಷಿಸಬಹುದು ಎಂದು ನಾಗಾಭರಣ ತಿಳಿಸಿದರು. 

SCROLL FOR NEXT