ಸಿನಿಮಾ ಸುದ್ದಿ

ಹಿಂದೂ ಭಾವನೆಗಳಿಗೆ ಘಾಸಿ: ಕೆಬಿಸಿ ನಿರೂಪಕ ಅಮಿತಾಬ್ ಬಚ್ಚನ್ ವಿರುದ್ಧ ಎಫ್ಐಆರ್ 

Raghavendra Adiga

ಜನಪ್ರಿಯ ರಿಯಾಲಿಟಿ ಶೋ "ಕೌನ್ ಬನೇಗಾ ಕರೋಡ್ ಪತಿ"ನಿರೂಪಕ ಅಮಿತಾಬ್ ಬಚ್ಚನ್ ಮತ್ತು ಸೋನಿ ಟಿವಿ ಕಾರ್ಯಕ್ರಮದ ತಯಾರಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 

ಶುಕ್ರವಾರದ "ಕರ್ಮವೀರ್" ವಿಶೇಷ ಸಂಚಿಕೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಸಂಬಂಧಿಸಿ ಲಖನೌನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ನಟರಾದ ಅನೂಪ್ ಸೋನಿ ಹಾಗೂ ಸಾಮಾಜಿಕ ಕಾರ್ಯಕರ್ತ ಬೇಜವಾಡ ವಿಲ್ಸನ್ ಹಾಟ್ ಸೀಟಿನಲ್ಲಿದ್ದಾಗ, ಬಚ್ಚನ್ 6,40,000 ರೂ.ಗಳ ನಗದು ಬಹುಮಾನಕ್ಕಾಗಿ ಕೇಳಲಾದ ಪ್ರಶ್ನೆ ವಿವಾದಕ್ಕೆ ಎಡೆ ಮಾಡಿದೆ.

ಪ್ರಶ್ನೆ ಹೀಗಿತ್ತು: 1927 ರ ಡಿಸೆಂಬರ್ 25 ರಂದು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿದರು?

ಆಯ್ಕೆಗಳು ಹೀಗಿದ್ದವು: (ಎ) ವಿಷ್ಣು ಪುರಾಣ (ಬಿ) ಭಗವದ್ಗೀತೆ, (ಸಿ) ಋಗ್ವೇದ ಹಾಗೂ  (ಡಿ) ಮನುಸ್ಮೃತಿ ಇದಕ್ಕೆ ಉತ್ತರ "ಮನುಸ್ಮೃತಿ" ಎಂದು ಘೋಷಿಸುವಾಗ, ಡಾ.ಅಂಬೇಡ್ಕರ್ ಪ್ರಾಚೀನ ಹಿಂದೂ ಪಠ್ಯದ ಪ್ರತಿಗಳನ್ನು ಖಂಡಿಸಿ ಸುಟ್ಟುಹಾಕಿದರು ಎಂದು ಬಿಗ್ ಬಿ ವಿವರಿಸಿದರು

ಇದಕ್ಕೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಅಮಿತಾಬ್ ಹಾಗೂ  ಕಾರ್ಯಕ್ರಮದ ತಯಾರಕರ ಬಗ್ಗೆ  ಸಾರ್ವಜನಿಕರು ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ. ಈ ಕಾರ್ಯಕ್ರಮವನ್ನು "ಎಡಪಂಥೀಯ ಪ್ರಚಾರ"ಕ್ಕಾಗಿ ಬಳಸಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದರೆ  ಇನ್ನಿತರರು ಶೋ "ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ" ಎಂದು ಹೇಳಿದ್ದಾರೆ. ಇದೇ ಹಿನ್ನೆಲೆ ಮಿತಾಭ್​ ಬಚ್ಚನ್​ ಹಾಗೂ ಕಾರ್ಯಕ್ರಮದ ತಯಾರಕರ ವಿರುದ್ಧ ಲಖನೌನಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT