ಸ್ಯಾಂಡಲ್'ವುಡ್ ನಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ನಿಂತಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರಕ್ಕೆ ಬಹುಭಾಷಾ ನಟ ಬಾಬಿ ಸಿಂಹ ಅವರು ಎಂಟ್ರಿ ಕೊಟ್ಟಿದ್ದಾರೆ.
ತಮಿಳು, ಮಲಯಾಳಂ ಹಾಗೂ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಬಾಬಿ ಸಿಂಹ ಅವರು ಕನ್ನಡ 777 ಚಾರ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಚಾರ್ಲಿ ಚಿತ್ರದ ನಾಯಕ ನಟ (ರಕ್ಷಿತ್ ಶೆಟ್ಟಿ) ಪ್ರಯಾಣದಲ್ಲಿ ನಿರ್ಣಾಯಕ ಹಂತದಲ್ಲಿ ಬಾಬಿ ಸಿಂಹ ಅವರು ಕಾಣಿಸಿಕೊಳ್ಳುತ್ತಿದ್ದಾರೆಂದು ಚಿತ್ರ ನಿರ್ದೇಶಕ ಕಿರಣ್ ರಾಜ್ ಕೆ ಅವರು ಹೇಳಿದ್ದಾರೆ.
ಬಾಬಿ ಸಿಂಹ ಅವರ ಹುಟ್ಟುಹಬ್ಬದ ಪ್ರಯುಕ್ತ ಬರ್ತ್ ಡೇ ವಿಶ್ ಮಾಡಿರುವ ರಕ್ಷಿತ್ ಶೆಟ್ಟಿ ಹಾಗೂ ಅವರ ತಂಡ ಸಿನಿಮಾದ ಫಲ್ಟ್ ಲುಕ್ ಪೋಸ್ಟರ್'ನ್ನು ಬಿಡುಗಡೆ ಮಾಡಿದೆ. ಪೋಸ್ಟರ್ ನಲ್ಲಿ ರಕ್ಷಿತ್ ಶೆಟ್ಟಿ, ಬಾಬಿ ಸಿಂಹ ಮತ್ತು ಎರಡು ಲ್ಯಾಬ್ರಡಾರ್ ನಾಯಿಗಳಿರುವುದು ಕಂಡು ಬಂದಿದೆ.
ವಿವಿಧ ಭಾಷೆಗಳಲ್ಲಿ ನಟಿಸಿರುವ ಒಬ್ಬ ನಟನಿಗಾಗಿ ನಾನು ಹುಡುಕಾಟ ನಡೆಸುತ್ತಿದ್ದೆ. ಈ ವೇಳೆ ಬಾಬಿ ಸಿಂಹ ಈ ಪಾತ್ರಕ್ಕೆ ಸೂಕ್ತ ನಟರೆನಿಸಿತು. ಅದನ್ನು ರಕ್ಷಿತ್ ಅವರು ಸಾಧ್ಯವಾಗಿಸಿದರು. ಚಿತ್ರದ ನಿರೂಪಣೆ ಹಾಗೂ ಅವರ ಪಾತ್ರದ ಕುರಿತು ಬಾಬಿ ಸಿಂಹ ಅವರು ರೋಮಾಂಚನಗೊಂಡು ನಟಿಸಲು ಒಪ್ಪಿಕೊಂಡಿದ್ದಾರೆಂದು ಕಿರಣ್ ತಿಳಿಸಿದ್ದಾರೆ.
ಈಗಾಗಲೇ ಚಿತ್ರ ತಂದ ಬಾಬಿ ಸಿಂಹ ಅವರೊಂದಿಗಿನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಒಂದು ವಾರಗಳ ಕಾಲ ಕೊಡೈಕನಾಲ್ ನಲ್ಲಿ ಚಿತ್ರೀಕರಣ ನಡೆಸಿದೆ ಎಂದು ತಿಳಿದುಬಂದಿದೆ.
ಪಾತ್ರವನ್ನು ಚಿತ್ರೀಕರಿಸುವಾಗ ಸಾಕಷ್ಟು ಆಲೋಚನೆಗಳು ಬಂದಿತ್ತು. ಬಾಬಿ ಅವರು ತಮ್ಮ ಅಭಿನಯದ ಮೂಲಕ ನಿರೀಕ್ಷೆಯನ್ನೂ ಮೀರಿಸಿದ್ದಾರೆಂದು ನಿರ್ದೇಶಕರು ತಿಳಿಸಿದ್ದಾರೆ.
777 ಚಾರ್ಲಿ ಚಿತ್ರವನ್ನು ಕಿರಣ್ ರಾಜ್ ನಿರ್ದೇಶನ ಮಾಡುತ್ತಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ 'ಪುಷ್ಕರ್ ಫಿಲ್ಮ್ಸ್' ಮತ್ತು ರಕ್ಷಿತ್ ಶೆಟ್ಟಿಯವರ 'ಪರಂವಃ ಸ್ಟುಡಿಯೋಸ್' ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ