ಸಿನಿಮಾ ಸುದ್ದಿ

ಕಲಾ ನಿರ್ದೇಶಕ ಜಿ.ಮೂರ್ತಿ ಇನ್ನಿಲ್ಲ

Nagaraja AB

ಬೆಂಗಳೂರು: ಸಿನಿಮಾ ಕಲಾನಿರ್ದೇಶಕ, ಚಿತ್ರನಿರ್ದೇಶಕ, ನಿರ್ಮಾಪಕ ಜಿ.ಮೂರ್ತಿ ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. 

ಮನೆಯಲ್ಲಿ ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದ ಅವರು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಅವರು ಬ್ರೈನ್‌ ಹ್ಯಾಮರೇಜ್‌ನಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

ಜಿ.ಮೂರ್ತಿ ಅವರು ಹಿರಿಯ ಚಿತ್ರನಿರ್ದೇಶಕ ಜಿ.ವಿ.ಅಯ್ಯರ್‌ ಅವರ ನಿಕಟವರ್ತಿಯಾಗಿದ್ದರು. ಅಯ್ಯರ್‌ ಅವರ ಸಿನಿಮಾಗಳಿಗೆ ಕಲಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಪಿ.ಕೃಷ್ಣಮೂರ್ತಿ ಅವರಿಗೆ ಸಹಾಯಕರಾಗಿ ಮೂರ್ತಿಯವರು ವೃತ್ತಿ ಆರಂಭಿ0ಸಿದರು.

ಮುಂದೆ ಸ್ವತಂತ್ರ್ಯ ನಿರ್ದೇಶಕರಾಗಿ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಈ ಪಟ್ಟಿಯಲ್ಲಿ ಕನ್ನಡವಷ್ಟೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳೂ ಸೇರಿವೆ.

‘ಚಂದ್ರಚಕೋರಿ’ ಮತ್ತು ‘ಕುರುನಾಡು’ ಚಿತ್ರಗಳ ಅತ್ಯುತ್ತಮ ಕಲಾನಿರ್ದೇಶನಕ್ಕಾಗಿ ಅವರಿಗೆ ಎರಡು ಬಾರಿ ರಾಜ್ಯಪ್ರಶಸ್ತಿ ಸಂದಿದೆ. ‘ಕುರುನಾಡು’ ಅವರ ನಿರ್ದೇಶನದ ಚಿತ್ರವೂ ಹೌದು. ಅವರ ನಿರ್ದೇಶನದ ‘ಶಂಕರ ಪುಣ್ಯಕೋಟಿ’ ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ (2008-09) ಗೌರವ ಸಂದಿದೆ. ವೈಷ್ಣವಿ, ಹಳ್ಳಿಯ ಮಕ್ಕಳು, ಅರಳುವ ಹೂಗಳು, ಸಿದ್ದಗಂಗಾ, ಸುಗಂಧಿ ಸೇರಿದಂತೆ ಒಟ್ಟು ಅವರು ಎಂಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 

ನಟ ಶ್ರೀನಿವಾಸ ಪ್ರಭು ಅವರ ಜೊತೆಗೂಡಿ ‘ಬಿಂಬ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದರು. ಒಂದೇ ಶಾಟ್‌ನಲ್ಲಿ ಒಬ್ಬನೇ ಕಲಾವಿದ ಅಭಿನಯಿಸಿದ್ದ ಜಗತ್ತಿನ ಮೊದಲ ಚಿತ್ರವಾಗಿ ಇದು ದಾಖಲಾಗಿದೆ. ಜಿ.ಮೂರ್ತಿ ನಿರ್ದೇಶನದ ಸಿನಿಮಾಗಳು ದೇಶ, ವಿದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಮೂರ್ತಿ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

SCROLL FOR NEXT