ಸಿನಿಮಾ ಸುದ್ದಿ

ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆ: ಖ್ಯಾತ ನಿರ್ಮಾಪಕನ ಬಂಧನ

Srinivasamurthy VN

ಹೈದರಾಬಾದ್: ತೆಲುಗಿನ ಖ್ಯಾತ ಕಿರುತೆರೆ ನಟಿ ಕೊಂಡಪಲ್ಲಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಖ್ಯಾತ ನಿರ್ಮಾಪಕರೊಬ್ಬರನ್ನು ಬಂಧಿಸಿದ್ದಾರೆ.

ಈಗಾಗಲೇ ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಅತ್ತ ಟಾಲಿವುಡ್ ನಲ್ಲೂ ನಟಿ ಶ್ರಾವಣಿ ಆತ್ಮಹತ್ಯೆ ಅಷ್ಟೇ ಪ್ರಮಾಣದ ಸುದ್ದಿಗೆ ಗ್ರಾಸವಾಗಿದೆ. ಶ್ರಾವಣಿ ಅತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷೆಗೊಳಪಡಿಸಿ ಎಂಬ ಆಗ್ರಹ ಕೇಳಿಬರುತ್ತಿದೆ. ಇತ್ತ ಇದೇ  ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೈದರಾಬಾದ್ ಪೊಲೀಸರು ಖ್ಯಾತ ನಿರ್ಮಾಪಕ ಅಶೋಕ್ ರೆಡ್ಡಿಯನ್ನು ಬುಧವಾರ ಬಂಧಿಸಿದ್ದಾರೆ. ಅಶೋಕ್ ರೆಡ್ಡಿ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ “ಆರ್ ಎಕ್ಸ್ 100”ನ ನಿರ್ಮಾಪಕರಾಗಿದ್ದಾರೆ.

ಅಂತೆಯೇ ನಟಿ ಶ್ರಾವಣಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಸಾಯಿ ಕೃಷ್ಣ ರೆಡ್ಡಿ ಮತ್ತು ದೇವರಾಜ್ ರೆಡ್ಡಿ ಕೂಡಾ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಬಂಧಿತರನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಹೈದರಾಬಾದ್ ನ ಮಧುರಾ ನಗರದಲ್ಲಿರುವ ಅಪಾರ್ಟ್ ಮೆಂಟ್ ನ ಬಾತ್ ರೂಂನಲ್ಲಿ ಟೆಲಿವಿಷನ್ ನಟಿ ಕೊಂಡಪಲ್ಲಿ ಶ್ರಾವಣಿ ಸೆಪ್ಟೆಂಬರ್ 8ರಂದು ಶವವಾಗಿ ಪತ್ತೆಯಾಗಿದ್ದರು. ಕೊಂಡಪಲ್ಲಿ ಶ್ರಾವಣಿ ತೆಲುಗಿನ ಜನಪ್ರಿಯ ಸೀರಿಯಲ್ ಗಳಾದ “ ಮನಸು ಮಮತಾ” ಹಾಗೂ ಮೌನರಾಗಂನಲ್ಲಿ ಮುಖ್ಯ ಪಾತ್ರ  ನಿರ್ವಹಿಸಿದ್ದಳು. ಈಕೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿವಾಸಿಯಾಗಿದ್ದು, ಕಳೆದ ಎಂಟು ವರ್ಷಗಳಿಂದ ಟಿವಿ ಸೀರಿಯಲ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ವರದಿ ತಿಳಿಸಿದೆ.

SCROLL FOR NEXT