ಸಿನಿಮಾ ಸುದ್ದಿ

ಡ್ರಗ್ ಕೇಸ್: ರವಿ ತೇಜಾ, ರಾಣಾ ದಗ್ಗುಬಾಟಿ. ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ 12 ಮಂದಿಗೆ ಇಡಿ ನೋಟಿಸ್

Shilpa D

ಹೈದರಾಬಾದ್: ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ 12 ಮಂದಿ ನಟ, ನಟಿಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿರುವುದಾಗಿ ವರದಿಯಾಗಿದೆ. ಡ್ರಗ್ಸ್ ಸೇವನೆ, ಸರಬರಾಜು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಮನ್ಸ್ ನೀಡಲಾಗಿದೆ. 

ನಟರಾದ ರಾಣಾ ದಗ್ಗುಬಾಟಿ, ರವಿ ತೇಜಾ, ನವದೀಪ್, ನಂದು, ತರುಣ್, ನಟಿಯರಾದ ರಾಕುಲ್ ಪ್ರೀತ್, ಚಾರ್ಮಿ ಕೌರ್, ಮುಮೈತ್ ಖಾನ್, ನಿರ್ದೇಶಕ ಪುರಿ ಜಗನ್ನಾಥ್ ಸೇರಿ 12 ಮಂದಿಗೆ ಸೆಪ್ಟೆಂಬರ್ 2ರಿಂದ 22ರ ಒಳಗೆ ವಿಚಾರಣೆಗೆ ಹಾಜರಾಗಲು ಇಡಿ ಸೂಚಿಸಿದೆ.

ಸೆಪ್ಟೆಂಬರ್ 6 ರಂದು ರಾಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8 ರಂದು ರಾಣಾ ದಗ್ಗುಬಾಟಿ, ಸೆಪ್ಟೆಂಬರ್ 9 ರಂದು ತೆಲುಗು ನಟ ರವಿತೇಜ ಮತ್ತು ಸೆಪ್ಟೆಂಬರ್ 31 ರಂದು ನಿರ್ದೇಶಕ ಪುರಿ ಜಗನ್ನಾಥ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. 

ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿತೇಜ ಹಾಗೂ ಪುರಿ ಜಗನ್ನಾಥ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ. ಆದರೆ ಇವರುಗಳು ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ, ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ,ನಟಿಯರ ವಿರುದ್ಧ 12 ಕೇಸ್ ದಾಖಲಿಸಿ ವಿಚಾರಣೆ ನಡೆಸಿತ್ತಾದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಕೈಬಿಟ್ಟಿತ್ತು.

SCROLL FOR NEXT