ಸಿನಿಮಾ ಸುದ್ದಿ

ಬಡವರಿಗಾಗಿ ಉಚಿತ ಆಕ್ಸಿಜನ್ ಸೆಂಟರ್ ಆರಂಭಿಸಿ ಮಾದರಿಯಾದ ಕವಿರಾಜ್

Raghavendra Adiga

ಕೋವಿಡ್ ಸಂಕಷ್ಟದ ಸಮಯದಲ್ಲಿ ಕನ್ನಡ ಚಿತ್ರರಂಗ ಸ್ಪಂದಿಸುತ್ತಿಲ್ಲ ಎಂಬ ಆರೋಪದ ನಡುವೆಯೇ ಚಿತ್ರ ಸಾಹಿತಿ ಕವಿರಾಜ್, ಬಡವರಿಗಾಗಿ ಉಚಿತ ಆಕ್ಸಿಜನ್ ಸೆಂಟರ್ ಆರಂಭಿಸಿದ್ದಾರೆ. ಆದರೆ ಜನರ ಚಪ್ಪಾಳೆ ಗಿಟ್ಟಿಸಿ ಹಣ ಎಣಿಸಿಕೊಂಡ ಹಲವು ಪ್ರಮುಖ ನಟ, ನಟಿಯರು ಈ ಸಂದರ್ಭದಲ್ಲಿ ಗಪ್ ಚುಪ್ ಆಗಿರುವ ಬಗ್ಗೆ ಸಾರ್ವಜನಿಕರಲ್ಲಿ ಬೇಸರ ಮೂಡಿದೆ.

ಆದಾಗ್ಯೂ, ಚಿತ್ರಸಾಹಿತಿ ಕವಿರಾಜ್ ಅವರು ಕೆಲವ ಸಮಾನ ಮನಸ್ಕರೊಟ್ಟಿಗೆ ಸೇರಿಕೊಂಡು ಬಡವರಿಗೆ ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್ ಆರಂಭಿಸಿ ಮಾದರಿಯಾಗಿದ್ದಾರೆ.

ಆಮ್ಲಜನಕ ಸಿಗದೆ ಕೋವಿಡ್‌ ರೋಗಿಗಳು ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡು ಮರುಗಿದ್ದು,''ಪರಿಸ್ಥಿತಿ ಬಹಳ ಕೈ ಮೀರಿದೆ. ಮುಂದೆ ಇನ್ನೂ ಕಠಿಣ ಆಗುವ ಸೂಚನೆಯಿದೆ. ಇಂತಾ ಹೊತ್ತಲ್ಲಿ ವ್ಯವಸ್ಥೆಯನ್ನು ದೂರುತ್ತ ಕೂರುವುದಕ್ಕಿಂತಾ, ಒಂದು ಕಲ್ಯಾಣ ಮಂಟಪ/ ಶೆಡ್ / ಖಾಲಿ ಬಿಲ್ಡಿಂಗ್/ ಶಾಲಾ ಕಾಲೇಜ್ ಬಿಲ್ಡಿಂಗ್ ತರಹದ ಯಾವುದಾದರೂ ಒಂದು ಜಾಗದಲ್ಲಿ ನಾವೇ ಅಂದರೆ ಒಂದಷ್ಟು ಸಮಾನ ಮನಸ್ಕ ಜನರೇ ಸೇರಿ ಒಂದಷ್ಟು ಆಕ್ಸಿಜನ್ ಸಮೇತ ಬೆಡ್ ಗಳನ್ನು ಬಡವರಿಗೆ ಏಕೆ ಒದಗಿಸಬಾರದು ಎಂಬ ಚಿಂತನೆ ಬಂದಿದೆ. ಸಮಾನ ಮನಸ್ಕರು, ಕೈ ಜೋಡಿಸುವ ಆಸಕ್ತಿ ಇರುವವರು ಸಾಧ್ಯಾಸಾಧ್ಯತೆ , ಸವಾಲು, ಪರಿಕರಗಳ ಲಭ್ಯತೆ (ಕಟ್ಟಡ, ಆಕ್ಸಿಜನ್ ಇತ್ಯಾದಿ.) ಬಗ್ಗೆ ಸಲಹೆ ಸೂಚನೆ ನೀಡಿ'' ಎಂದು ಮನವಿ ಮಾಡಿ ಕೆಲವು ಸಮಾನ ಮನಸ್ಕರನ್ನು ಟ್ಯಾಗ್ ಮಾಡಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇ 07ರಂದು ಫೇಸ್‌ಬುಕ್ ಪೋಸ್ಟ್ ಮಾಡಿರುವ ಕವಿರಾಜ್, 'ನಾವೆಲ್ಲಾ ಸೇರಿ ಬಡವರಿಗೆ 'ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್' ಮಾಡುವ ಚಿಂತನೆಗೆ ಹಲವರು ಕೈ ಜೋಡಿಸುತ್ತಿದ್ದು ಆಶಾದಾಯಕ ಪ್ರಗತಿಯಾಗಿದೆ. ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಮೊದಲ ಹಂತಕ್ಕೆ ಆಗಿದೆ. ಕೋಣನಕುಂಟೆ ಬಳಿ ಒಳ್ಳೆಯ ಸ್ಥಳ ದೊರಕಿದೆ, ಬಿಬಿಎಂಪಿ ಆರೋಗ್ಯ ಅನುಮತಿ ಮತ್ತು ಸಹಕಾರದ ಭರವಸೆ ಸಿಕ್ಕಿದೆ'' ಎಂದಿದ್ದಾರೆ. ಆದರೆ 'ಯಾರಾದರೊಬ್ಬರು ಸಹೃದಯಿ ವೈದ್ಯರು ನಮ್ಮ ಜೊತೆ ಕೈ ಜೋಡಿಸಬೇಕು .ದಿನಕ್ಕೆ ಒಂದು ಭೇಟಿ ಕೊಟ್ಟು ಪರಿಶೀಲಿಸುವಂತಾದರು ಸಾಕು. ಅವರಿಗೆ ಗೌರವಧನವನ್ನು ನೀಡಬಹುದು. ಅಂತವರು ಯಾರಾದರು ನಿಮ್ಮ ಬಳಗದಲ್ಲಿದ್ದರೆ ತಿಳಿಸಿ‌. ನಮ್ಮ ಜೊತೆ ಯಾವುದೇ ರೀತಿಯಲ್ಲಿ ಕೈ ಜೋಡಿಸಲು ಆಸಕ್ತಿ ಇರುವವರೆಲ್ಲರಿಗೂ ಸ್ವಾಗತ'' ಎಂದಿದ್ದಾರೆ.

SCROLL FOR NEXT