ಸಿನಿಮಾ ಸುದ್ದಿ

'ಅಪ್ಪು ಬಳಿ ಕೋಟ್ಯಂತರ ರೂಪಾಯಿ ಇತ್ತು, ಬಂಗಲೆಯಿತ್ತು, ದುಬಾರಿ ಕಾರುಗಳಿದ್ದವು, ಎಲ್ಲವೂ ಇತ್ತು, ಆದರೆ 5 ನಿಮಿಷ ಹೆಚ್ಚು ಸಮಯವಿರಲಿಲ್ಲ': ರಾಘಣ್ಣ ಭಾವುಕ

Sumana Upadhyaya

ಬೆಂಗಳೂರು: ಅಪ್ಪು ಹುಟ್ಟಿದ ವರ್ಷ ನಮ್ಮ ಕುಟುಂಬಕ್ಕೆ ಎಲ್ಲಾ ಭಾಗ್ಯ ಒದಗಿಬಂತು. ಅಪ್ಪಾಜಿ ಡಾ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್ ಬಂತು. ನಮ್ಮ ಪೂರ್ಣಿಮಾ ಎಂಟರ್ ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್ ಪ್ರೊಡಕ್ಷನ್ ಹೌಸ್ ಆರಂಭ ಮಾಡಿದೆವು.

ತಂದೆಯವರು ಈಗಿರುವ ಮನೆಯ ಎಸ್ಟೇಟ್ ಖರೀದಿಸಿದರು. ಹೀಗೆ ಅಪ್ಪು ಹುಟ್ಟಿದ ನಂತರ ಎಲ್ಲವೂ ಒಳ್ಳೆಯದಾಗುತ್ತಾ ಹೋಯಿತು. 
ಅಪ್ಪು ಕೂಡ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡುತ್ತಾ ಹೋದನು, ಚಿಕ್ಕ ಮಗುವಾಗಿದ್ದಾಗಲೇ ಅಭಿಯಿಸಿದನು, ಹಾಡಿದನು, ಪ್ರಶಸ್ತಿ ಪಡೆದುಕೊಂಡನು, ಮ್ಯಾರಥಾನ್ ಓಡಬೇಕಾದವನು 100 ಮೀಟರ್ ರೇಸ್ ನಲ್ಲಿ ಓಡಿ ಪ್ರಯಾಣವನ್ನು ಮುಗಿಸಿಬಿಟ್ಟ ಹೀಗೆ ಹೇಳಿ ಭಾವುಕರಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್.

ಕನ್ನಡ ಕಿರುತೆರೆ ಕಲಾವಿದರ ಅಸೋಸಿಯೇಷನ್ ನಗರದಲ್ಲಿ ನಿನ್ನೆ ಅಪ್ಪು ಅಮರ ಸ್ಮರಣಾ ಗೌರವಾರ್ಥ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ತಮ್ಮ ತಮ್ಮನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರು.

ನನ್ನ ತಮ್ಮ 50 ವರ್ಷದಲ್ಲಿ ಮಾಡಬೇಕಾಗಿದ್ದನ್ನು 25 ವರ್ಷದಲ್ಲಿ ಮಾಡಿದ್ದ, ಅವನು ನಮ್ಮನ್ನು ಬಿಟ್ಟು ಹೋಗುತ್ತಿಲ್ಲ, ಮತ್ತೆ ಮತ್ತೆ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವ ಕೆಲಸ ಮಾಡಿ ಮುಗಿಸಿಬಿಟ್ಟು ಹೋಗಿದ್ದಾನೆ, ನಾವು ಒಂದೇ ತಾಯಿಯ ಗರ್ಭದಲ್ಲಿ ಹುಟ್ಟಿದ್ದರೂ ನನಗೆ ಅವನ ಗುಣ ಬರಲಿಲ್ಲ, ಕುಟುಂಬಕ್ಕೂ ಗೊತ್ತಾಗದಂತೆ ದಾನಧರ್ಮ ಮಾಡುತ್ತಿದ್ದನೆಂದರೆ ಅಂತಹ ಗುಣಕ್ಕೆ ಏನು ಹೇಳಬೇಕು ಹೇಳಿ, ಅವನು ಅಪ್ಪನಾಗಿ ನಮ್ಮನ್ನು ಬಿಟ್ಟುಹೋದ ಎಂದು ಭಾವುಕರಾದರು ರಾಘಣ್ಣ.

ಅಪ್ಪುವಿನ ಹೆಸರಲ್ಲಿ ಇಂದು ಹತ್ತಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ರಸ್ತೆಗಳಿಗೆ ಹೆಸರಿಡುತ್ತಾರೆ, ಅಭಿಮಾನಿಗಳಿಗೆ ತಮ್ಮದೇ ರೀತಿಯಲ್ಲಿ ಗೌರವ ತೋರಿಸುತ್ತಿದ್ದಾರೆ, ಇವ್ಯಾವುದೂ ಮತ್ತೆ ಅಪ್ಪುವನ್ನು ಜೀವಂತವಾಗಿ ತರುವುದಿಲ್ಲ, ಆದರೆ ಆತನ ಮೇಲೆ ಗೌರವ, ಪ್ರೀತಿಯಿಟ್ಟು ಎಲ್ಲರೂ ಮಾಡುತ್ತಿದ್ದಾರೆ, ಇವನ್ನೆಲ್ಲ ನೋಡಿದಾಗ ಕುಟುಂಬದವರಾದ ನಮಗೆ ಮಾತೇ ಬರುತ್ತಿಲ್ಲ ಎಂದರು.

ಅಪ್ಪುವಿನ ಕೊನೆಯ ದಿನವನ್ನು ನೆನೆದ ರಾಘಣ್ಣ: ನನಗೆ ದಿನವೂ ಕಾಡುತ್ತಿರುವ ಪ್ರಶ್ನೆಯೊಂದೇ ಎಂದ ರಾಘವೇಂದ್ರ ರಾಜ್ ಕುಮಾರ್, ಅಂದು ಅಪ್ಪುಗೆ ಏನು ಕಡಿಮೆಯಾಗಿತ್ತು ಹೇಳಿ, ಕೋಟ್ಯಂತರ ರೂಪಾಯಿ ಹಣವಿತ್ತು, ಬಂಗಲೆಯಿತ್ತು, ಐಷಾರಾಮಿ ಐದಾರು ಕಾರುಗಳಿದ್ದವು, ಜನರಿದ್ದರು, ಆದರೆ 46 ವರ್ಷದ ಜೊತೆಗೆ ಇನ್ನೊಂದು 5 ನಿಮಿಷ ಸಮಯವನ್ನು ದೇವರು ಹೆಚ್ಚು ಆತನಿಗೆ ಕೊಡುತ್ತಿದ್ದರೆ ಬದುಕುತ್ತಿದ್ದನೇನೋ?

ಆಂಬ್ಯುಲೆನ್ಸ್ ಗೆ ಡಿಜಿಟಲ್ ಬೋರ್ಡ್ : ಇಲ್ಲಿ ಯಾರನ್ನು ದೂರುವುದು, ಯಾರಲ್ಲಿ ಹೇಳಿಕೊಳ್ಳುವುದು, ಪಕ್ಕದ ಮನೆಯಲ್ಲಿ ನಾನಿದ್ದೆ. ವೈದ್ಯರಲ್ಲಿ ತಪಾಸಣೆ ಮಾಡಿಸಿ ವಿಕ್ರಂ ಆಸ್ಪತ್ರೆಗೆ ಹೋಗಬೇಕೆಂದಾಗ ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಕರೆಸಿದರೆ ತಡವಾಗುತ್ತದೆ ಎಂದು ನಮ್ಮದೇ ಕಾರಲ್ಲಿ ಕರೆದುಕೊಂಡು ಹೋದೆವು. ವಿಪರೀತ ಟ್ರಾಫಿಕ್. ಒಂದು ಕಾರಣದಿಂದ ಅಪ್ಪು ಜೀವ ಹೋಗಿದೆ. ಅಂದರೆ ಒಂದು ಬಲವಾದ ಕಾರಣದಿಂದ ಅವನು ಬಿಟ್ಟು ಹೋಗಿದ್ದಾನೆ. ಈಗ ನಾವು ಸರಿಹೋಗಬೇಕು. ಆಂಬ್ಯುಲೆನ್ಸ್ ಗೆ ಡಿಜಿಟಲ್ ಬೋರ್ಡ್ ಬರಬೇಕು. ಆಂಬ್ಯುಲೆನ್ಸ್ ಯಾವ ಆಸ್ಪತ್ರೆಗೆ ಹೋಗುತ್ತಿದೆ ಎಂದು ತೋರಿಸಬೇಕು. ಆಗ ಟ್ರಾಫಿಕ್ ಪೊಲೀಸ್ ಬೇರೆಯವರಿಗೆ ಸಂಚಾರವನ್ನು ತೆರವು ಮಾಡಿಕೊಡಬೇಕು. ಅಂತಹ ವ್ಯವಸ್ಥೆ ಮಾಡಿಕೊಟ್ಟರೆ ಅನೇಕ ಜೀವವನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.

4 ನಿಮಿಷ ಬೇಗನೆ ಆಸ್ಪತ್ರೆಗೆ ಅಂದು ಅಪ್ಪು ತಲುಪುತ್ತಿದ್ದರೆ ಬದುಕುತ್ತಿದ್ದನೇನೋ, ಆಸ್ಪತ್ರೆಗೆ ಹೋಗುವ ರಸ್ತೆಗಳು ಅಗಲೀಕರಣವಾಗಬೇಕು, ಇಲ್ಲಿ ನಾನು ಸರ್ಕಾರದವರನ್ನು ದೂರುತ್ತಿಲ್ಲ, ನಮಗೇ ಜನರು ಮೊದಲು ಬದಲಾವಣೆಯಾಗಬೇಕು. ನಮ್ಮಲ್ಲಿ ಬದಲಾವಣೆ ಬಂದರೆ ನಂತರ ವ್ಯವಸ್ಥೆ ತನ್ನಿಂತಾನೇ ಬದಲಾಗುತ್ತದೆ ಎಂದರು.

ನೂರು ವರ್ಷ ಹಂದಿಯಾಗಿ ಬದುಕುವುದಕ್ಕಿಂತ ನಂದಿಯಾಗಿ ಹತ್ತು ವರ್ಷ ಬದುಕಬೇಕು ಎಂದು ತೋರಿಸಿಬಿಟ್ಟು ನನ್ನ ತಮ್ಮ ಹೊರಟುಹೋಗಿದ್ದಾನೆ ಎಂದರು. 

SCROLL FOR NEXT