ಸಿನಿಮಾ ಸುದ್ದಿ

ವಿಜಯಲಕ್ಷ್ಮಿಗೆ ಕನ್ನಡಿಗರಿಂದ ಲಕ್ಷಾಂತರ ರೂ. ಸಹಾಯ; ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ ಎಂದ 'ನಾಗಮಂಡಲ' ನಟಿ

Lingaraj Badiger

ಬೆಂಗಳೂರು: ಮಾತೃವಿಯೋಗದ ದುಃಖದಲ್ಲಿರುವ 'ನಾಗಮಂಡಲ' ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರಿಗೆ ರಾಜ್ಯದ ಕಲಾಭಿಮಾನಿಗಳು ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದಾರೆ.

ನಟಿಯ ಪರವಾಗಿ ಜನಸ್ನೇಹಿ ಅನಾಥಾಶ್ರಮ ಮಾಡಿಕೊಂಡಿದ್ದ ಮನವಿಗೆ 3 ಲಕ್ಷದ 2 ಸಾವಿರದ 900 ರೂ. ಹರಿದುಬಂದಿದ್ದು, ಆ ಹಣವನ್ನು ವಾಣಿಜ್ಯ ಮಂಡಳಿ ಮುಖೇನ ವಿಜಯಲಕ್ಷ್ಮೀಯವರಿಗೆ ಹಸ್ತಾಂತರಿಸಲಾಗಿದೆ.

ಈ ವೇಳೆ ಸುದ್ದಿಗಾರರೊಡನೆ ಮಾತನಾಡಿದ ನಟಿ, ಸಹಾಯದ ರೂಪದಲ್ಲಿ ಬಂದಿರುವ ಹಣವನ್ನು ವಾಪಸ್ ಅನಾಥಾಶ್ರಮಕ್ಕೇ ಕೊಡಬೇಕೆಂದು ಆಲೋಚಿಸಿದ್ದೆ. ಆದರೆ ಈ ಸಮಯದಲ್ಲಿ ಸಹೋದರಿಯ ಚಿಕಿತ್ಸೆಗೆ ಹಾಗೂ ವಾಸಿಸಲು ಸೂಕ್ತ ಮನೆಗಾಗಿ ಹಣದ ಅವಶ್ಯಕತೆಯಿರುವುದರಿಂದ ಅದನ್ನು ಯಾವ ರೀತಿ ಬಳಸಬೇಕೆಂದು ವಾಣಿಜ್ಯ ಮಂಡಳಿಯ ಹಿರಿಯರು ಸೂಚಿಸಿದ್ದಾರೆ ಎಂದರು.

ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ
ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಹಾಗೂ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿರುವ ನಟಿ ವಿಜಯಲಕ್ಷ್ಮಿ, “ಪ್ರಸ್ತುತ ನನ್ನ ಸುತ್ತ ಸ್ಟ್ರಾಂಗ್ ಫ್ಯಾಮಿಲಿ ಇದೆ. ಕರ್ನಾಟಕ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ನನ್ನ ಬೆನ್ನ ಹಿಂದಿದೆ” ಎಂದು ಹೇಳಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಭಾ ಮಾ ಹರೀಶ್, ಗಿರೀಶ್, ಮತ್ತಿತರರು ಉಪಸ್ಥಿತರಿದ್ದರು.

ಸಹೋದರಿ ಉಷಾ ಕೊಂಚ ಚೇತರಿಸಿಕೊಂಡ ಬಳಿಕ ಚಿತ್ರರಂಗದಲ್ಲಿ ಮುಂದುವರಿಯುವುದಾಗಿ ತಿಳಿಸಿದ ವಿಜಯಲಕ್ಷ್ಮಿ, ತಾಯಿಗೆ ಏನಾದೀತೋ ಎಂಬ ಭಯದಿಂದ ಕನ್ನಡಿಗರ ಬಳಿ ಭಿಕ್ಷೆ ನೀಡಿ ಎಂದು ಬೇಡಿದೆ. ಕೊನೆಗೂ ಅವರು ಉಳಿಯಲಿಲ್ಲ. ವಿಡಿಯೋಗಳ ಮೂಲಕ ಏನಾದರೂ ಮಾತನಾಡಿದ್ದರೂ ಅದರ ಹಿಂದೆ ಭಾವನೆಗಳಿವೆ ಎಂದರು.

“ಅಮ್ಮ ನನ್ನನ್ನು ಬಿಟ್ಟು ಹೋದರಾದರೂ, ದೊಡ್ಡ ಫ್ಯಾಮಿಲಿಯನ್ನು ಕೊಟ್ಟು ಹೋಗಿದ್ದಾರೆ. ಆಕೆ ಅನಾಥಾಶ್ರಮಕ್ಕೆ ಸೇರಕೂಡದು ಎಂದು ಬಯಸಿದ್ದೆ. ದೇವರ ದಯೆಯಿಂದ ಹಾಗಾಗಲಿಲ್ಲ. ಆದರೆ ಅಂತ್ಯಸಂಸ್ಕಾರ ಮಾತ್ರ ಅನಾಥಾಶ್ರಮದ ವತಿಯಿಂದ ನಡೆಯಿತಾದರೂ, ಸಂಸ್ಕಾರಯುತವಾಗಿ ನಡೆದಿದೆ” ಎಂದರು.

SCROLL FOR NEXT