ಸಿನಿಮಾ ಸುದ್ದಿ

ವಿಜಯ ದೇವರಕೊಂಡ ನಟನೆಯ ‘ಲೈಗರ್​’: ಎರಡನೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಕುಸಿತ

Ramyashree GN

ಟಾಲಿವುಡ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ಲೈಗರ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಆರಂಭವನ್ನು ಪಡೆದುಕೊಂಡರೂ, ನಕಾರಾತ್ಮಕ ವಿಮರ್ಶೆಗಳಿಂದ ಚಿತ್ರವು ಹಿನ್ನಡೆ ಅನುಭವಿಸಿದೆ.

ಸದ್ಯದ ವರದಿಗಳ ಪ್ರಕಾರ, ಲೈಗರ್ ತನ್ನ ಆರಂಭಿಕ ದಿನದಲ್ಲಿ ಸುಮಾರು 33.12 ಕೋಟಿ ಗಳಿಸಿತು. ಆದರೆ, ಎರಡನೇ ದಿನದಲ್ಲಿ ಚಿತ್ರವು ಮೊದಲ ದಿನದ ಶೇ 50 ರಷ್ಟು ಕಲೆಕ್ಷನ್ ಮಾಡಲು ಕೂಡ ಸಾಧ್ಯವಾಗಿಲ್ಲ. ಚಿತ್ರಕ್ಕೆ ವಿಮರ್ಷಕರು ಪೂರ್ಣ ಪ್ರಮಾಣದ ಅಂಕವನ್ನು ನೀಡಿಲ್ಲದೇ ಇರುವುದರಿಂದ, ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ನಿರ್ದೇಶಕ ಪುರಿ ಜಗನ್ನಾಥ್ ಅವರ ಲೈಗರ್ ಸಿನಿಮಾ ಉತ್ತಮ ಮುಂಗಡ ಬುಕ್ಕಿಂಗ್ ಮೂಲಕ ಆರಂಭಿಕ ದಿನದಲ್ಲಿ 33.12 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಇದೀಗ ಚಿತ್ರದ ಭವಿಷ್ಯ ಮಂಕಾಗಿದೆ. ವಿಜಯ್ ದೇವರಕೊಂಡ ಅವರ ನಟನೆಯ ಚಿತ್ರವು 2ನೇ ದಿನದಂದು ತನ್ನ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡಿದೆ.

ವರದಿಗಳ ಪ್ರಕಾರ, ಬಿಡುಗಡೆಯಾದ ಎರಡನೇ ದಿನದಲ್ಲಿ ಚಿತ್ರವು ಸುಮಾರು 16 ಕೋಟಿ ರೂಪಾಯಿಯನ್ನಷ್ಟೇ ಗಳಿಸಿದೆ. ಸದ್ಯ ವಾರಾಂತ್ಯದಲ್ಲಿ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುವ ನಿರೀಕ್ಷೆಯಿದೆ.

ಲೈಗರ್ ಸಿನಿಮಾವು ಪುರಿ ಜಗನ್ನಾಥ್ ಬರೆದು ನಿರ್ದೇಶಿಸಿರುವ ಕ್ರೀಡಾ ಹಿನ್ನೆಲೆಯುಳ್ಳದ್ದಾಗಿದ್ದು, ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರು ಬಾಲಿವುಡ್ ಪ್ರವೇಶಿಸಿದ್ದಾರೆ. ನಟಿ ಅನನ್ಯ ಪಾಂಡೆ ಅವರಿಗೆ ಚೊಚ್ಚಲ ತೆಲುಗು ಚಿತ್ರವಾಗಿದೆ. ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾವನ್ನು ಚಿತ್ರೀಕರಿಸಲಾಗಿತ್ತು.

ಆಗಸ್ಟ್ 25 ರಂದು ಸಿನಿಮಾ ಬಿಡುಗಡೆಯಾದಾಗಿನಿಂದಲೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್, ಮಕರಂದ್ ದೇಶಪಾಂಡೆ, ಅಲಿ ಮತ್ತು ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

SCROLL FOR NEXT