ನಟ ನರೇಶ್ ತನ್ನ ಮೂರನೇ ಪತ್ನಿ ರಮ್ಯಾ ರಘುಪತಿ ಹಾಗೂ ಮಗನೊಂದಿಗೆ, ಬಲಚಿತ್ರದಲ್ಲಿ ಪವಿತ್ರಾ ಲೋಕೇಶ್(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ರಮ್ಯಾ ಯಾರು, ಕ್ವೀನ್ ಎಲಿಜಬೆತ್ತಾ?, ನರೇಶ್ ಜೊತೆಗೆ ನನ್ನ ಹೆಸರು ಏಕೆ ತರುತ್ತಿದ್ದಾರೆ, ನನ್ನನ್ನು ಏಕೆ ಗುರಿಯಾಗಿಸುತ್ತಿದ್ದಾರೆ: ಪವಿತ್ರಾ ಲೋಕೇಶ್

ಸಾಮಾಜಿಕ ಮಾಧ್ಯಮಗಳಲ್ಲಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಹುಭಾಷಾ ನಟಿ ಕನ್ನಡ ಮೂಲದ ಪವಿತ್ರಾ ಲೋಕೇಶ್ ಕೆಲ ದಿನಗಳ ಹಿಂದೆ ಮೈಸೂರಿನ ಸೈಬರ್ ಠಾಣೆ ಮೆಟ್ಟಿಲೇರಿದ್ದರು. 

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಹುಭಾಷಾ ನಟಿ ಕನ್ನಡ ಮೂಲದ ಪವಿತ್ರಾ ಲೋಕೇಶ್ (Pavitra Lokesh) ಕೆಲ ದಿನಗಳ ಹಿಂದೆ ಮೈಸೂರಿನ ಸೈಬರ್ ಠಾಣೆ ಮೆಟ್ಟಿಲೇರಿದ್ದರು. 

ಕಳೆದ ಹಲವು ದಿನಗಳಿಂದ ಮಾಧ್ಯಮ, ಯೂಟ್ಯೂಬ್, ಸೋಷಿಯಲ್ ಮೀಡಿಯಾಗಳಿಗೆ ಸುದ್ದಿಗೆ ಆಹಾರವಾಗಿರುವ ನಟಿ ಪವಿತ್ರಾ ಲೋಕೇಶ್ ಇಂದು ಖುದ್ದಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತೆಲುಗಿನ ಹಿರಿಯ ನಟ ನರೇಶ್ (Telugu actor Naresh) ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupati) ನಡುವಿನ ಕೌಟುಂಬಿಕ ಕಲಹದ ವಿಲನ್ ನಂತೆ ಮೂರನೇ ವ್ಯಕ್ತಿಯಾಗಿ ಬಂದಿರುವ ನಟಿ ಪವಿತ್ರಾ ಲೋಕೇಶ್ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳ ವಿರುದ್ಧವೂ ಸಿಡಿಮಿಡಿಗೊಂಡಿದ್ದಾರೆ. 

ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿಯವರು ಅವರ ವೈಯಕ್ತಿಕ ಕುಟುಂಬ ಕಲಹದಲ್ಲಿ ನನ್ನನ್ನು ಸುಮ್ಮನೆ ಎಳೆದುತರುತ್ತಿದ್ದಾರೆ. ಅವರ ನಡುವಿನ ಕಲಹಕ್ಕೂ ನನಗೂ ಸಂಬಂಧವೇ ಇಲ್ಲ ಎಂದಿದ್ದಾರೆ. 

ನಟ ನರೇಶ್ ಮತ್ತು ಅವರ ಪತ್ನಿ ರಮ್ಯಾ ನಡುವಿನ ವೈಮನಸ್ಸು, ಕಲಹದಲ್ಲಿ ನನ್ನನ್ನು ಯಾಕೆ ಗುರಿಯಾಗಿಸುತ್ತಿದ್ದಾರೆ ಎಂದು ಮಾಧ್ಯಮಗಳು ಕಂಡುಹಿಡಿಯಬೇಕು. ನರೇಶ್ ಅವರ ಜೊತೆ ಉತ್ತಮ ಸಂಬಂಧ ಅಥವಾ ಗೆಳತಿಯಾಗಿದ್ದೇನೆಂಬ ಮಾತ್ರಕ್ಕೆ ನನ್ನನ್ನು ಖಳನಾಯಕಿಯಂತೆ ಬಿಂಬಿಸಲು ರಮ್ಯಾ ಹೊರಟಿದ್ದಾರೆಯೇ ಅವರ ಉದ್ದೇಶವೇನಿದೆ ಎಂದು ಪವಿತ್ರಾ ಲೋಕೇಶ್ ಪ್ರಶ್ನಿಸಿದ್ದಾರೆ.

ನನ್ನ ಪತಿ ಸರಿಯಿಲ್ಲ ಎಂದು ಆರೋಪಗಳನ್ನು ಹೊರಿಸುವ ರಮ್ಯಾ ಅವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಂಡು ಇರಬೇಕಲ್ಲವೇ, ಅವರ ಮನೆಗ ಹೋಗಿ ಇರಬೇಕಲ್ಲವೇ ಅವರು ಹೈದರಾಬಾದ್ ನಲ್ಲಿರುವುದು ಅಲ್ಲಿಯೇ ಮಾಧ್ಯಮಗಳ ಮುಂದೆ ಮಾತನಾಡಬೇಕಿತ್ತು, ಇಲ್ಲಿ ಬೆಂಗಳೂರಿಗೆ ಬಂದು ಮಾತನಾಡುವ ಅಗತ್ಯವೇನಿದೆ, ನನ್ನನ್ನು ಇಲ್ಲಿ ಮಧ್ಯೆ ಏಕೆ ದೂಷಿಸುತ್ತಿದ್ದಾರೆ ಎಂದು ಕೇಳಿದರು.

ರಮ್ಯಾ ಯಾರು ಎಂದು ಯಾರಿಗೂ ಗೊತ್ತಿಲ್ಲ, ಅವರೇನು ಎಲಿಜಬೆತ್ ರಾಣಿಯೇ, ನಟಿಯೇ ಅಥವಾ ರಾಜಕಾರಣಿಯೇ? ಮಾಧ್ಯಮಗಳಲ್ಲಿ ನನ್ನ ಮತ್ತು ನರೇಶ್ ಫೋಟೋ, ವಿಡಿಯೊಗಳನ್ನು ಹಾಕಿ ತೋರಿಸಿ ಅವರು ಪ್ರಚಾರ ಪಡೆಯುತ್ತಿದ್ದಾರೆ. ಈಗ ನಮ್ಮ ವಿಷಯದಿಂದಾಗಿ ಜನಪ್ರಿಯರಾಗುತ್ತಿದ್ದಾರೆ, ಅವರ ಮೂಲವೆಲ್ಲಿ ಅಲ್ಲಿ ಮಾತನಾಡುವ ಬದಲು ಬೆಂಗಳೂರಿಗೆ ಬಂದು ಏಕೆ ಮಾತನಾಡುತ್ತಿದ್ದಾರೆ, ಅನುಕಂಪ ಗಿಟ್ಟಿಸಿ ಪ್ರಚಾರ ಪಡೆದು ಜನಪ್ರಿಯರಾಗಲು ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದು ನೇರವಾಗಿ ಪವಿತ್ರಾ ಲೋಕೇಶ್ ರಮ್ಯಾ ರಘುಪತಿ ಮೇಲೆ ಹರಿಹಾಯ್ದಿದ್ದಾರೆ.

ಸುಚೇಂದ್ರ ಪ್ರಸಾದ್ ಒಟ್ಟಿಗೆ 11 ವರ್ಷ ಇದ್ದೆ: ನಾನು ಮತ್ತು ಸುಚೇಂದ್ರ ಪ್ರಸಾದ್ ಒಟ್ಟಿಗೆ ಹನ್ನೊಂದು ವರ್ಷ ಇದ್ದದ್ದು ನಿಜ. ಆದರೆ, ಅವರ ಜೊತೆ ನನ್ನ ಮದುವೆ ಆಗಿಲ್ಲ. ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜೊತೆಗೆ ಇದ್ದೆವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಆದರೂ, ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ ಎಂದಿದ್ದಾರೆ.

ಖಾಸಗಿ ಮಾಧ್ಯಮದವರೊಬ್ಬರು ನನ್ನ ಮನೆಯೊಳಗೆ ಬಂದು ಕ್ಯಾಮರಾ ಇಟ್ಟು ಸ್ಟಿಂಗ್ ಆಪರೇಷನ್ ಮಾಡುತ್ತಾರೆ ಎಂದರೆ ಏನರ್ಥ, ನಾಳೆ ಮನೆಯೊಳಗೆ ಯಾರೋ ಬಂದು ನನ್ನ ಜೀವಕ್ಕೆ ಏನಾದರೂ ಅಪಾಯ ಮಾಡಬಹುದು, ನನ್ನ ಜೀವಕ್ಕೆ ಬೆದರಿಕೆಯಿದೆ ಎನಿಸುತ್ತಿದೆ, ನನಗೆ ರಕ್ಷಣೆ ಬೇಕು ಎಂದು ಪೊಲೀಸರನ್ನು ಕೇಳುತ್ತೇನೆ ಎಂದರು.  

ಮಾಧ್ಯಮಗಳಿಗೆ ನಟ ನರೇಶ್ ಪ್ರತಿಕ್ರಿಯೆ: ರಮ್ಯಾ ರಘುಪತಿ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದು ಇಲ್ಲಿ ಖಾಸಗಿ ಮಾಧ್ಯಮಗಳ ಮುಂದೆ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದರು. ನರೇಶ್ ತಮಗೆ ಮೋಸ ಮಾಡಿದ್ದಾರೆ, ನರೇಶ್ ಒಬ್ಬ ಹೆಣ್ಣುಬಾಕ, ಹಲವು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ, ಈಗ ಪವಿತ್ರಾ ಲೋಕೇಶ್ ಜೊತೆ ಸಂಬಂಧ ಹೊಂದಿದ್ದಾನೆ. ಹೀಗಾಗಿ ನನಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಒಂದು ತಿಂಗಳ ಹಿಂದೆ ತಮಗೆ ಡಿವೋರ್ಸ್ ನೊಟೀಸ್ ಕಳುಹಿಸಿದ್ದಾನೆ, ಆದರೆ ಯಾವುದೇ ಕಾರಣಕ್ಕೂ ವಿಚ್ಛೇದನ ನೀಡಲು ನಾನು ಸಿದ್ಧನಿಲ್ಲ, ನಮಗೊಬ್ಬ ಮಗನಿದ್ದಾನೆ, ಅವನ ಭವಿಷ್ಯಕ್ಕೋಸ್ಕರ ಹಾಗೂ ನಮ್ಮ ಮುಂದಿನ ಜೀವನ ಚೆನ್ನಾಗಿರಲು ನಾನು ಡಿವೋರ್ಸ್ ನೀಡಲು ಸಿದ್ಧಳಿಲ್ಲ ಎಂದು ಪಟ್ಟುಹಿಡಿದಿದ್ದಾರೆ. 

ಇದಾದ ಬಳಿಕ ನಿನ್ನೆ ಬೆಂಗಳೂರಿಗೆ ಬಂದಿದ್ದ ನಟ ನರೇಶ್ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಪತ್ನಿ ರಮ್ಯಾ ಆರೋಪಗಳೆಲ್ಲವನ್ನೂ ಅಲ್ಲಗಳೆದಿದ್ದು, ರಮ್ಯಾ ಮಾನಸಿಕವಾಗಿ ಸ್ಥಿಮಿತದಲ್ಲಿಲ್ಲ, ಆಕೆ ಹಲವು ಪುರುಷರ ಜೊತೆ ದೈಹಿಕ ಸಂಬಂಧ ಹೊಂದಿದ್ದಾಳೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನನಗೆ ಹಿಂಸೆ ನೀಡಿದ್ದಾಳೆ, 10 ವರ್ಷಗಳ ಹಿಂದೆ ಮದುವೆಯಾದ ನಾವು 8 ವರ್ಷಗಳಿಂದ ದೂರವಿದ್ದೇವೆ ಎಂದಿದ್ದಾರೆ.

ಪವಿತ್ರಾ, ನಾನು ಉತ್ತಮ ಸ್ನೇಹಿತರು: ಇನ್ನು ಪವಿತ್ರಾ ಲೋಕೇಶ್ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿರುವ ನಟ ನರೇಶ್ ಪವಿತ್ರಾ ನನಗೆ ನಾಲ್ಕು ವರ್ಷಗಳಿಂದ ಪರಿಚಯ, ಇದುವರೆಗೆ 6 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನ್ನ ವೈಯಕ್ತಿಕ ಜೀವನದಲ್ಲಿ ನೊಂದು ಖಿನ್ನತೆಯ ಮಟ್ಟಕ್ಕೆ ಹೋಗಿದ್ದ ವೇಳೆ ಪವಿತ್ರಾ ಲೋಕೇಶ್ ಸಿನೆಮಾ ಸೆಟ್ ನಲ್ಲಿ ಕಷ್ಟ ಸುಖ ಮಾತನಾಡುವಾಗ ಆತ್ಮೀಯವಾಗಿ ನನಗೆ ಹತ್ತಿರವಾದರು. ನಮ್ಮಿಬ್ಬರ ಭಾವನೆಗಳು, ಇಷ್ಟಗಳು ಹೊಂದಿಕೆಯಾದವು, ಅವರು ನನಗೆ ಉತ್ತಮ ಸ್ನೇಹಿತೆ, ಮಾರ್ಗದರ್ಶಿ, ನಾವು ಮದುವೆಯಾಗಿಲ್ಲ, ಮುಂದೆ ಮದುವೆಯಾಗುತ್ತೇವೆಯೋ ಇಲ್ಲ ಸ್ನೇಹಿತರಾಗಿರುತ್ತೇವೆಯೋ ನಮ್ಮಿಬ್ಬರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.

ತೆಲುಗಿನ ಸ್ಟಾರ್ ನಟ ಹಾಗೂ ತೆಲುಗು ಚಿತ್ರರಂಗದ ದೊಡ್ಡ ಕುಟುಂಬದ ಕೌಟುಂಬಿಕ ಕಲಹವಂತೂ ಮಾಧ್ಯಮಗಳಲ್ಲಿ ಬಹುದೊಡ್ಡ ಸದ್ದು ಮಾಡಿದ್ದು ಇದು ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎಂದು ನೋಡಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT