ಸಿನಿಮಾ ಸುದ್ದಿ

ಪ್ರೇಮ್- ಧ್ರುವ ಸರ್ಜಾ ಕಾಂಬಿನೇಷನ್ ನ 'ಕೆ ಡಿ' ಸಿನಿಮಾ ವಿತರಣಾ ಹಕ್ಕು ಚಿತ್ರೀಕರಣಕ್ಕೂ ಮುನ್ನವೇ ಮಾರಾಟ!

Shilpa D

ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅವರ ಮುಂದಿನ ಚಿತ್ರಕ್ಕೆ 'ಕೆಡಿ ದಿ ಡೆವಿಲ್' ಎಂಬ ಟೈಟಲ್ ಇಡಲಾಗಿದೆ. ಸಿನಿಮಾದ ಟೀಸರ್ ಅನ್ನು ಬಾಲಿವುಡ್ ನಟ ಸಂಜಯ್ ದತ್, 'ಈಗ' ನಿರ್ಮಾಪಕ ಸಾಯಿ ಕೊರಪ್ಪಾಟಿ, ಬಿ-ಟೌನ್ ವಿತರಕ ಅನಿಲ್ ಥಡಾನಿ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆಯಾಗಲಿದೆ. ಧ್ರುವ ಸರ್ಜಾ ಮುಖ್ಯಭೂಮಿಕೆಯ ಈ ಬಹು ನಿರೀಕ್ಷಿತ ಚಿತ್ರಕ್ಕೆ 'ಕೆ ಡಿ' ಎಂದು ಹೆಸರಿಡಲಾಗಿದೆ. 3 ನಿಮಿಷಗಳ ಟೈಟಲ್ ಟೀಸರ್‌‌ನಲ್ಲಿ ಧ್ರುವ ಸರ್ಜಾ ನಟೋರಿಯಸ್ ರೌಡಿ ಕಾಳಿಯ ಪಾತ್ರದಲ್ಲಿ ಮಿಂಚಿದ್ದಾರೆ. 60ರ ದಶಕದ ಹಿನ್ನೆಲೆಯಲ್ಲಿ ಪ್ರೇಮ್ ಈ ಚಿತ್ರದ ಕಥೆಯನ್ನು ಹೆಣೆದಿದ್ದಾರೆ.

ಚಿತ್ರದಲ್ಲಿ ಧ್ರುವ ಸರ್ಜಾ ನಿರ್ವಹಿಸುತ್ತಿರುವ ಪಾತ್ರದ ಹೆಸರು ಕಾಳಿ ಅಲಿಯಾಸ್ ಕಾಳಿದಾಸ. ಕಥಾನಾಯಕನ ಹೆಸರನ್ನೇ ತುಂಡರಿಸಿ ಕಥಾಹಂದರಕ್ಕೆ ಹೊಂದುವಂತೆ 'ಕೆ ಡಿ' ಎಂದು ಪ್ರೇಮ್ ಹೆಸರಿಟ್ಟಿದ್ದಾರೆ.

ಟೀಸರ್‌‌ನಲ್ಲಿ ಕಾಣಸಿಗುವ ಜೈಲು ಮತ್ತು ಹೊಡೆದಾಟದ ದೃಶ್ಯಗಳು ಸಂಪೂರ್ಣ ರೆಟ್ರೋ ಶೈಲಿಯಲ್ಲಿದ್ದು, ಚಿತ್ರದ ಬಗೆಗೆ ಸಿನಿ ರಸಿಕರಲ್ಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.  ಈಗಾಗಲೇ ಕೆ ಡಿ ಚಿತ್ರದ ಶೂಟಿಂಗ್ ಪ್ರಾರಂಭಗೊಂಡಿದೆ. ಬಾಲಿವುಡ್ ನಟ ಸಂಜಯ್ ದತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಪ್ಯಾನ್ ಇಂಡಿಯಾ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.

ಕುತೂಹಲಕಾರಿಯಾಗಿ, ತಮಿಳು ಟೀಸರ್‌ಗೆ ವಿಜಯ್ ಸೇತುಪತಿ ಧ್ವನಿ ನೀಡಿದ್ದಾರೆ, ಮಲಯಾಳಂ ಟೀಸರ್‌ಗೆ ಮೋಹನ್‌ಲಾಲ್ ಧ್ವನಿ ನೀಡಿದ್ದಾರೆ. ಯಶ್ ಅವರ ಕೆಜಿಎಫ್ ಚಾಪ್ಟರ್-2 ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಸಂಜಯ್ ದತ್ ಮತ್ತೊಮ್ಮೆ ದಕ್ಷಿಣಕ್ಕೆ ಮರಳಲಿದ್ದು, ಕೆಡಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಟೈಟಲ್ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ಗೆ ಮುಗಿಬಿದ್ದಿರುವ ನಿರ್ದೇಶಕ ಪ್ರೇಮ್, ಈ ಪ್ರಾಜೆಕ್ಟ್ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಡಿಟೇಲ್ಸ್ ಕೊಟ್ಟಿದ್ದಾರೆ.

ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಚಿತ್ರದ ವಿತರಣಾ ಹಕ್ಕುಗಳು ಮಾರಾಟವಾಗಿವೆ. "ಅನಿಲ್ ಥಡಾನಿ, (ಕೆಜಿಎಫ್ ಮತ್ತು ಕಾಂತಾರಂತಹ ಚಲನಚಿತ್ರಗಳ ಪ್ರಸಿದ್ಧ ವಿತರಕರು) ಉತ್ತರ ಭಾರತದಲ್ಲಿ ಕೆಡಿ ವಿತರಣೆಯ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ. ಸಾಯಿ ಕೊರಪಟ್ಟಿಯವರ ವಾರಾಹಿ ಚಲನ ಚಿತ್ರಂ ಈ ಚಿತ್ರವನ್ನು ತೆಲುಗಿನಲ್ಲಿ ವಿತರಿಸಲಿದೆ.

ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ತಮಿಳು ವರ್ಸನ್ ಉಸ್ತುವಾರಿ ವಹಿಸಿದೆ. ಮಲಯಾಳಂನಲ್ಲಿ ವಿತರಣೆಯನ್ನು ಮೋಹನ್ ಲಾಲ್ ಅವರ ಆಶೀರ್ವಾದ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಾಡಲಿದ್ದಾರೆ" ಎಂದು ಪ್ರೇಮ್ ಹೇಳಿದ್ದಾರೆ.

ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದು, ಕನ್ನಡದ ನಟಿಯರನ್ನೆ ನಾಯಕಿಯಾಗಿ  ಆಯ್ಕೆ ಮಾಡಲು ನಿರ್ಧರಿಸಿರುವುದಾಗಿ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ. ಸಿನಿಮಾಗೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ.

SCROLL FOR NEXT