ಸಿನಿಮಾ ಸುದ್ದಿ

ಹಿರಿಯ ನಟಿ ಆಶಾ ಪಾರೇಖ್​ಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಣೆ

Shilpa D

ನವದೆಹಲಿ: ಭಾರತೀಯ ಚಿತ್ರರಂಗದ ಅತ್ಯುನ್ನತ, ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಬಾಲಿವುಡ್ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ನೀಡಲು ನಿರ್ಧರಿಸಲಾಗಿದೆ.

ಭಾರತೀಯ ಚಿತ್ರರಂಗಕ್ಕೆ ಆಶಾ ಪಾರೇಖ್ ನೀಡಿರುವ ಕೊಡುಗೆಗಳನ್ನ ಪರಿಗಣಿಸಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. 2019ನೇ ಸಾಲಿನ ಪ್ರಶಸ್ತಿಯು ರಜನಿಕಾಂತ್​ ಅವರಿಗೆ ಸಿಕ್ಕಿತ್ತು

ಮಹಾರಾಷ್ಟ್ರದ ಮುಂಬೈನಲ್ಲಿ ಅಕ್ಟೋಬರ್ 2, 1942ರಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿರುವ ಆಶಾ ಅವರು ‘ಕರ ಭವನ’ ಎಂಬ ನೃತ್ಯ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.

10ನೇ ವಯಸ್ಸಿನಲ್ಲಿಯೇ ಆಶಾ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 1952ರಲ್ಲಿ ‘ಆಸ್ಮಾನ್’ ಚಿತ್ರದಲ್ಲಿ ಮೊದಲ ಬಾರಿಗೆ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಲಾವಿದರಾಗಿ ಪರಿಚಯರಾದರು.

ಮತ್ತೆ ತಮ್ಮ 16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದರು. ನಿರ್ದೇಶಕ ನಾಸಿರ್ ಹುಸೇನ್ ಅವರ ‘ದಿಲ್ ದೇಕೆ ದೇಖೋ’ (1959) ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು.

ಅದಾದ ನಂತರ ‘ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ’ (1961), ‘ಫಿರ್ ವಹಿ ದಿಲ್ ಲಯಾ ಹೂನ್’ (1963), ‘ತೀಸ್ರಿ ಮಂಜಿಲ್’ (1966), ‘ಬಹರೋನ್ ಕೆ ಸಪ್ನೆ’ (1967) ಚಿತ್ರಗಳಲ್ಲಿ ನಟಿಸಿ ಮತ್ತಷ್ಟು ಖ್ಯಾತಿ ಗಳಿಸಿದರು. ‘ಪ್ಯಾರ್ ಕಾ ಮೌಸಂ’ (1969) ಮತ್ತು ‘ಕಾರವಾನ್’ (1971) ಚಿತ್ರ ಕೂಡ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು.

ಆಶಾ ಪರೇಖ್ ಸುಮಾರು 78 ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 1999ರಲ್ಲಿ ತೆರೆಕಂಡ ‘ಸಾರ್ ಆಂಖೋನ್ ಪರ್’ ಇವರ ಕಡೆಯ ಚಿತ್ರವಾಗಿದೆ. 1992ರಲ್ಲಿ ಅವರಿಗೆ ಭಾರತ ಸರ್ಕಾರ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ನಿರ್ದೇಶಕರು ಮತ್ತು ನಿರ್ಮಾಪಕರೂ ಆಗಿರುವ ಪಾರೇಖ್ ಅವರು 1990 ರ ದಶಕದ ಉತ್ತರಾರ್ಧದಲ್ಲಿ "ಕೋರಾ ಕಾಗಜ್" ಅನ್ನು ನಿರ್ದೇಶಿಸಿದ್ದರು. ಇದು ಬಹಳ ಪ್ರಸಿದ್ಧಿ ಪಡೆದಿತ್ತು.

SCROLL FOR NEXT