ಸಿನಿಮಾ ಸುದ್ದಿ

ಮಹಿಳೆಯರ ಹತ್ಯೆಯ ಹಿಂದಿನ ಕಥನವೇ ‘ಕ್ರೀಮ್’ ಸಿನಿಮಾ

Manjula VN

ಅಗ್ನಿ ಶ್ರೀಧರ್‌ ಕಥೆ ಹಾಗೂ ಸಂಭಾಷಣೆ ಬರೆದಿರುವ, ದೇವೇಂದ್ರ ಡಿ.ಕೆ ನಿರ್ಮಿಸಿರುವ ಹಾಗೂ ಅಭಿಷೇಕ್‌ ಬಸಂತ್‌ ನಿರ್ದೇಶನದ “ಕ್ರೀಮ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ನ್ ಹಂತದಲ್ಲಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡದ ಸದಸ್ಯರು ಕ್ರೀಮ್ ಚಿತ್ರದ ಕುರಿತು ಮಾತನಾಡಿದರು.

2011ರಿಂದಲೂ ಈ ವಿಷಯದ ಕುರಿತು ಸಿನಿಮಾ ಮಾಡಬೇಕೆಂದು ಚಿಂತನೆ ನಡೆಸುತ್ತಿದ್ದೆ. 2011ರಲ್ಲಿ ಎದೆಗಾರಿಕೆ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ದಂಡುಪಾಳ್ಯ ಚಿತ್ರದ ಕುರಿತ ನನ್ನ ಪ್ರತಿಕ್ರಿಯೆಯನ್ನು ಕೇಳಲಾಗಿತ್ತು. ದಂಡುಪಾಳ್ಯ ಗ್ಯಾಂಗ್ ಮಾಡಿದ್ದಾರೆ ಎನ್ನಲಾದ ಎಂಭತ್ತರಷ್ಟು ಕೊಲೆಗಳು ಸುಳ್ಳು ಎಂದು ಪ್ರಾಮಾಣಿಕವಾಗಿ ಹೇಳಿದ್ದೆ, ಹಾಗೆಂದು ಅವರೇನು ಸಂತರು ಎಂದು ಹೇಳಲಿಲ್ಲ. ಆದರೆ, ಅವರು ಕೊಲೆಗಾರರಾಗಿರಲಿಲ್ಲ. ನನ್ನ ಹೇಳಿಕೆ ಕುರಿತು ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು, ಚರ್ಚೆಗಳು ಶುರುವಾಗಿತ್ತು. ನಿಜವಾಗಿಯೂ ಈ ಹೇಯ ಕೃತ್ಯ ಎಸಗಿದವರು ಅಪರಾಧಿಗಳಾಗದಿರುವುದು, ಅವರಿಗೆ ಶಿಕ್ಷೆಯಾಗದಿರುವುದು ನನ್ನಲ್ಲಿ ಕೋಪವನ್ನು ಹುಟ್ಟಿಸಿತ್ತು. ಇಂತಹ ಕಥೆಯನ್ನು ಕ್ರೀಮ್ ಚಿತ್ರದ ಮೂಲಕ ಹೇಳಲು ಹೊರಡಿಸಿದ್ದೇವೆಂದು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್ ಅವರು ಹೇಳಿದ್ದಾರೆ.

ಇದೇ ವೇಳೆ ಲಂಡನ್‌ನ ಕುಖ್ಯಾತ ಜ್ಯಾಕ್ ದಿ ರಿಪ್ಪರ್‌ನ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಜ್ಯಾಕ್ ದಿ ರಿಪ್ಪರ್‌ನ ನಿಜವಾದ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದರು.

ನಟಿ ಸಂಯುಕ್ತಾ ಹೆಗಡೆ ಮಾತನಾಡಿ, ಕ್ರೀಮ್ ಚಿತ್ರ ನನಗೆ ಅತ್ಯಂತ ನೆಚ್ಚಿನ ಹಾಗೂ ಬಹಳ ಹತ್ತಿರದ ಸಿನಿಮಾ ಆಗಿದೆ. ಸಿನಿಮಾಗಾಗಿ 2೦೦ ಪರ್ಸೆಂಟ್ ಎಫರ್ಟ್ ಹಾಕಿದ್ದೇನೆ. ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ಹೊಸ ಮತ್ತು ಸಂಪೂರ್ಣವಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದು ತಮ್ಮ ಪಾತ್ರದ ಕುರಿತು ಹೇಳಿದ್ದಾರೆ.

ಇದೇ ವೇಳೆ ಚಿತ್ರಕ್ಕಾಗಿ ತಾವು ಪಟ್ಟು ಶ್ರಮ ಹಾಗೂ ಚಿತ್ರೀಕರಣದ ವೇಳೆ ತಮಗಾದ ಗಾಯವನ್ನು ಸ್ಮರಿಸಿದ ಅವರು, ನಡೆಯಲಾಗದ ಸ್ಥಿತಿಗೆ ಎಂದಿಗೂ ಹೋಗಿರಲಿಲ್ಲ. ಆದರೆ, ಚಿತ್ರೀಕರಣದ ವೇಳೆ ಆದ ಗಾಯದಿಂದ ತಿಂಗಳುಗಟ್ಟಲೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಚಿತ್ರ ನನಗೆ ಅತ್ಯಂತ ಮುಖ್ಯ ಹಾಗೂ ಜವಾಬ್ದಾರಿಯತವಾಗಿತ್ತು. ಹಾಗಾರಿ ಸಣ್ಣ ರಿಸ್ಕ್ ಕೂಡ ತೆಗೆದುಕೊಳ್ಳಲು ಬಯಸಲಿಲ್ಲ. ಪ್ರತೀದಿನ ಫಿಸಿಯೋಥೆರಪಿಗೆ ಒಳಗಾಗಿದ್ದೆ. ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳಲು ಚಿತ್ರವು ನನ್ನನ್ನು ಪ್ರೇರೇಪಿಸಿತು. ಚಿತ್ರದಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಬೆವರು, ಕಣ್ಣೀರು ಮಾತ್ರವಲ್ಲ ರಕ್ತವನ್ನೂ ನೋಡಿದ್ದೇನೆಂದು ತಿಳಿಸಿದರು.

ಅಧಿಕಾರಶಾಹಿ ವ್ಯಕ್ತಿಗಳು ಮನುಷ್ಯರನ್ನು ಹತ್ಯೆ ಮಾಡುತ್ತಾರೆ. ಇಂದಿಗೂ ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ. ಇದನ್ನು ವಿವಿಧ ಪಾತ್ರಗಳ ಮೂಲಕ ಜನರ ಮುಂದಿಡಲಾಗುತ್ತಿದೆ. ಇಡೀ ಕಥೆಯನ್ನು ಸಂಪೂರ್ಣವಾಗಿ ನಿಯೋ-ನಾಯರ್ ಶೈಲಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಜೂನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿರುವ ನಿರ್ದೇಶಕ ಅಭಿಷೇಕ್ ಅವರು ಹೇಳಿದ್ದಾರೆ.

ಸುಮ್ವರ್ದಿನಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಿಕೆ ದೇವೇಂದ್ರ ನಿರ್ಮಾಣದ ಈ ಚಿತ್ರಕ್ಕೆ ರೋಹಿತ್ ಸೋವರ್ ಅವರ ಸಂಗೀತ ಮತ್ತು ಸುಂಜೋ ವೇಲಾಯುಧನ್ ಅವರ ಛಾಯಾಗ್ರಹಣವಿದ್ದು, ಚಿತ್ರದಲ್ಲಿ ಅರುಣ್ ಸಾಗರ್, ರೋಷನ್, ಅಗ್ನಿ ಶ್ರೀಧರ್, ಬಚನ್ ಮತ್ತು ಆರನ್ ರೋಡ್ರಿಗಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಚಿತ್ರದ ಕಲಾ ವಿಭಾಗವನ್ನು ಶಿವಕುಮಾರ್ ನಿರ್ವಹಿಸಿದ್ದಾರೆ.

SCROLL FOR NEXT