ಸಿನಿಮಾ ಸುದ್ದಿ

'ಡೋಂಟ್ ವರಿ 2' ಹೊಸ ರ್‍ಯಾಪ್ ಹಾಡಿನ ಮೂಲಕ ಮತ್ತೆ ಟ್ರೆಂಡ್ ಸೃಷ್ಟಿಸಿದ ಆಲ್ ಓಕೆ; ಚಿಂತೆ ಬೇಡ, ಕೂಲ್ ಆಗಿರಿ ಎಂಬ ಸಂದೇಶ!

Ramyashree GN

ಬೆಂಗಳೂರು: ಯೂಟ್ಯೂಬ್‌ನಲ್ಲಿ 9,50,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಕನ್ನಡ ರ್‍ಯಾಪರ್ ಮತ್ತು ನಿರ್ಮಾಪಕ ಅಲೋಕ್ ಬಾಬು ಆರ್ ಅಲಿಯಾಸ್ ಆಲ್ ಓಕೆ, ಇದೀಗ "ಡೋಂಟ್ ವರಿ 2" ನೊಂದಿಗೆ ಬಂದಿದ್ದಾರೆ. ಈ ಹಾಡು ಇದೀಗ ವೈರಲ್ ಆಗುತ್ತಿದ್ದು, ಇದು ಮೂರು ವರ್ಷಗಳ ಹಿಂದೆ ಬಿಡುಗಡೆಯಾದ 'ಡೋಂಟ್ ವರಿ' ಹಾಡಿನ ಮುಂದುವರಿದ ಭಾಗವಾಗಿದೆ.

'ಇತ್ತೀಚಿನ ದಿನಗಳಲ್ಲಿ ಚಿಂತೆ ನಮ್ಮ ಅಸ್ತಿತ್ವದ ಭಾಗವಾಗಿದೆ. ನಾವು ಹೊಸದೇನನ್ನೋ ಪ್ರಯತ್ನಿಸಿದಾಗ ನಾನು ಸೇರಿದಂತೆ ಎಲ್ಲರೂ ಈ ಭಾವನೆಯ ಮೂಲಕವೇ ಹಾದುಹೋಗಿರುತ್ತಾರೆ. ಒತ್ತಡ ಇದ್ದಾಗಲೂ ಕೂಲ್ ಆಗಿ ಇರುವುದನ್ನು ಈ ಹಾಡು ಒತ್ತಿ ಹೇಳುತ್ತದೆ. ಸೋಲುತ್ತೇನೆ ಎಂಬ ಭಯವಿದ್ದರೂ ಪ್ರಯತ್ನಕ್ಕೆ ಹಿಂಜರಿಯಬಾರದು ಎಂಬ ಸಂದೇಶವನ್ನು ನಾನು ಹೇಳಲು ಹೊರಟಿದ್ದೇನೆ’ ಎಂದು ಅಲೋಕ್ ಬಾಬು ಹೇಳುತ್ತಾರೆ.

2019 ರಲ್ಲಿ ಡೋಂಟ್ ವರಿ ಯಶಸ್ಸಿನ ನಂತರ ಎರಡನೇ ಹಾಡನ್ನು ಪ್ರಾರಂಭಿಸಲಾಯಿತು. 'ಮೊದಲ ಹಾಡಿನ ಬಿಡುಗಡೆಯ ನಂತರ ಅನೇಕ ಜನರು ಎರಡನೆಯದ್ದಕ್ಕಾಗಿ ಕಾಯುತ್ತಿದ್ದರು. ಇದು ಉಪದೇಶವಲ್ಲ ಮತ್ತು ಮೋಜಿನ ರೀತಿಯಲ್ಲಿ ಸಂದೇಶವನ್ನು ನೀಡುತ್ತದೆ' ಎನ್ನುತ್ತಾರೆ. 

ಡೋಂಟ್ ವರಿ 2 ಮೆಲೋಡಿ, ಇಡಿಎಂ ಮತ್ತು ರ್‍ಯಾಪ್‌ನಂತಹ ವಿಭಿನ್ನ ಅಂಶಗಳನ್ನು ಹೊಂದಿದೆ. 'ನಾನು ಯಾವುದೇ ನಿರ್ದಿಷ್ಟ ಪ್ರಕಾರಕ್ಕೆ ಅಂಟಿಕೊಳ್ಳಲು ಬಯಸಲಿಲ್ಲ. ಹಾಗಾಗಿ ನೀವು ಇದನ್ನು ಫ್ಯೂಷನ್ ಎಂದು ಕರೆಯಬಹುದು. ಹಾಡು ಎಲ್ಲಕ್ಕಿಂತ ಹೆಚ್ಚು ಮನರಂಜನಾತ್ಮಕವಾಗಿರಬೇಕು ಎಂದು ಬಯಸಿದ್ದೆ ಎಂದು ಅಲೋಕ್ ಹೇಳುತ್ತಾರೆ.

ಅಲೋಕ್ ಬಾಬು ಅವರ ಹಾಡುಗಳು ರಾತ್ರೋರಾತ್ರಿ ಲಕ್ಷಗಟ್ಟಲೆ ವೀಕ್ಷಣೆ ಪಡೆಯುತ್ತವೆ. ಈ ಬಗ್ಗೆ ಮಾತನಾಡುವ ಅವರು, 'ಬಹುಶಃ ನನ್ನ ಸಂಗೀತ ಮಾಸ್ ಜನರಿಗಾಗಿರುತ್ತದೆ ಮತ್ತು ನಿರ್ದಿಷ್ಟ ಪ್ರಕಾರಕ್ಕೆ ಅಂಟಿಕೊಳ್ಳದಿರುವುದು ಮುಂದಿನ ಹಾಡು ಯಾವುದು ಎಂಬ ಕುತೂಹಲವನ್ನು ಸಹ ಉಂಟುಮಾಡುತ್ತದೆ' ಎಂದು ಹೇಳುತ್ತಾರೆ.

SCROLL FOR NEXT