ಸಿನಿಮಾ ಸುದ್ದಿ

'ಬಾಡಿಗಾರ್ಡ್‌', 'ಹಿಟ್ಲರ್' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಸಿದ್ಧಿಕಿಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ

Shilpa D

ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಿದ್ಧಿಕಿಗೆ ತೀವ್ರ ಹೃದಯಾಘಾತವಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ.

69 ವರ್ಷದ ಸಿದ್ಧಿಕಿಗೆ ಹೃದಯಾಘಾತ ಆಗುತ್ತಿದ್ದಂತೆಯೇ, ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸೋಮವಾರ ಮಧ್ಯಾಹ್ನ ಸಿದ್ಧಿಕಿ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈಗಲೂ ಅವರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ECMO (Extracorporeal Membrane Oxygenation) ಸಪೋರ್ಟ್‌ನಲ್ಲಿ ಅವರನ್ನು ಇರಿಸಲಾಗಿದೆ. ಸಿದ್ಧಿಕಿ ಅವರು ಲಿವರ್‌ಗೆ ಸಂಬಂಧಿಸಿದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅವರಿಗೆ ನ್ಯುಮೋನಿಯಾ ಕೂಡ ಇತ್ತು ಎನ್ನಲಾಗಿದೆ.

ಹಲವು ವರ್ಷಗಳಿಂದ ಸಿದ್ಧಿಕಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಗೆಳೆಯ ಲಾಲ್​ ಜೊತೆ ಸೇರಿ ಅವರು ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಸಿದ್ಧಿಕಿ-ಲಾಲ್​ ಎಂದೇ ಖ್ಯಾತರಾದ ಅವರಿಬ್ಬರು ಜಂಟಿಯಾಗಿ ಅನೇಕ ಸಿನಿಮಾಗಳಿಗೆ ಕಥೆ-ಚಿತ್ರಕಥೆಯನ್ನೂ ಬರೆದಿದ್ದಾರೆ.

ಸಿದ್ಧಿಕಿ ಅವರಿಗೆ ಹೃದಯಾಘಾತ ಆಗಿರುವ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಅವರ ಹೆಲ್ತ್​ ಅಪ್​ಡೇಟ್​ ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ. ಸಿದ್ಧಿಕಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

1986ರಲ್ಲಿ ತೆರೆಕಂಡ 'ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್‌' ಸಿನಿಮಾಗೆ ಚಿತ್ರಕತೆ ಬರೆಯುವುದರೊಂದಿಗೆ ಸಿನಿ ಪಯಣ ಆರಂಭಿಸಿದ ಸಿದ್ಧಿಕಿ, 1989ರಲ್ಲಿ ಬಿಡುಗಡೆಯಾದ 'ರಾಮ್‌ಜಿ ರಾವ್‌ ಸ್ಪೀಕಿಂಗ್‌' ಸಿನಿಮಾ ಮೂಲಕ ನಿರ್ದೇಶಕರಾದರು. ಅವರು ನಿರ್ದೇಶನ ಮಾಡಿರುವ ಕೊನೇ ಸಿನಿಮಾ 'ಬಿಗ್‌ ಬ್ರದರ್‌' 2020ರಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ಹಿಂದಿಯಲ್ಲೂ ಸಿನಿಮಾ ನಿರ್ದೇಶಿಸಿದ ಖ್ಯಾತಿ ಅವರದ್ದು.

SCROLL FOR NEXT