ಸಿನಿಮಾ ಸುದ್ದಿ

'ಬಡವ ರಾಸ್ಕಲ್' ಬಳಿಕ ಶಂಕರ್ ಗುರು-ಧನಂಜಯ್ ಕಾಂಬಿನೇಶನ್‌ನಲ್ಲಿ 'ಅಣ್ಣ from Mexico' ಚಿತ್ರ ಘೋಷಣೆ 

Ramyashree GN

ಬಡವ ರಾಸ್ಕಲ್ ಚಿತ್ರದ ಮೂಲಕ ಯಶಸ್ಸು ಕಂಡ ನಿರ್ದೇಶಕ ಹಾಗೂ ನಟ ಶಂಕರ್ ಗುರು ಮತ್ತು ನಟ ಧನಂಜಯ್ ಇದೀಗ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇದೀಗ, 'ಅಣ್ಣ from Mexico' ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಕಾಮಿಡಿ ಮತ್ತು ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ. 

ಆಗಸ್ಟ್ 23ರ ಮಧ್ಯರಾತ್ರಿ ಧನಂಜಯ್ ಅವರ ಜನ್ಮದಿನದಂದು ಈ ಸಿನಿಮಾ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ. 2021ರಲ್ಲಿ ತೆರೆಗೆ ಬಂದಿದ್ದ ಬಡವ ರಾಸ್ಕರ್ ಸಿನಿಮಾ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದ ಧನಂಜಯ್ ಅವರು ತಮ್ಮದೇ ಡಾಲಿ ಪಿಕ್ಚರ್ಸ್ ಅಡಿ ಸಿನಿಮಾವನ್ನು ನಿರ್ಮಿಸಿದ್ದರು.

ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಧನಂಜಯ್ ಅವರು ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪದಕ ಧರಿಸಿ, ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

'ನಾನು ಯಾವಾಗಲೂ ಧನಂಜಯ್‌ನನ್ನು ಹೆಚ್ಚು ಮಾಸ್-ಓರಿಯೆಂಟೆಡ್ ಲುಕ್‌ನಲ್ಲಿ ಪ್ರಸ್ತುತಪಡಿಸಲು ಬಯಸುತ್ತೇನೆ ಮತ್ತು ಈ ಕಂಟೆಂಟ್ ಅದಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ' ಎಂದು ಈ ವರ್ಷದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗುತ್ತಿರುವ ಶಂಕರ್ ಗುರು ಹೇಳುತ್ತಾರೆ.

ಚಿತ್ರದಲ್ಲಿ ನಟರಾದ ನಾಗಭೂಷಣ ಮತ್ತು ಪೂರ್ಣಚಂದ್ರ ಮೈಸೂರು ನಟಿಸಲಿದ್ದು, ಬಡವ ರಾಸ್ಕಲ್ ಚಿತ್ರದಲ್ಲಿ ಧನಂಜಯ್ ಅವರೊಂದಿಗೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕೂಡ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರೆ. 

ದಿ ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರಕ್ಕೆ 'ಮಾನ್ಸೂನ್ ರಾಗ' ಸಿನಿಮಾ ಖ್ಯಾತಿಯ ಎಸ್‌ಕೆ ರಾವ್ ಛಾಯಾಗ್ರಹಣ ಮಾಡಲಿದ್ದಾರೆ. 

ಕಥೆಯು ಪ್ರಧಾನವಾಗಿ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಅಲ್ಲದೆ, ಚಿತ್ರದ ನಿರೂಪಣೆಯ ಪ್ರಮುಖ ದೃಶ್ಯಗಳು ಮೆಕ್ಸಿಕೋದಲ್ಲಿ ಸಂಭವಿಸುತ್ತವೆ. ಮೆಕ್ಸಿಕೋದಲ್ಲೂ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದಲ್ಲದೇ ಪರಮ್ ನಿರ್ದೇಶನದ ಸಿನಿಮಾದಲ್ಲಿ ಧನಂಜಯ್ ನಟಿಸಲಿದ್ದು, ಇದು ಸದ್ಯ ನಿರ್ಮಾಣ ಹಂತದಲ್ಲಿದೆ. ರೋಹಿತ್ ಪದಕಿ ನಿರ್ದೇಶಿಸಿರುವ, ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ.

SCROLL FOR NEXT