ಲೇಡೀಸ್ ಬಾರ್ ಹೆಸರಿನ ಸಿನಿಮಾದ ಹಾಡುಗಳು ಮತ್ತು ಟೀಸರ್ ಬಿಡುಗಡೆ ಆಗಿದ್ದು, ಬಹುತೇಕ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ.
ಮುತ್ತು ಎ.ಎನ್ ನಿರ್ದೇಶಿಸಿರುವ ಲೇಡಿಸ್ ಬಾರ್ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಇತ್ತೀಚಿಗೆ ಚಿತ್ರತಂಡ ಬಿಡುಗಡೆ ಮಾಡಿತು.
ಈ ವೇಳೆ ಮಾತನಾಡಿದ ನಿರ್ದೇಶಕ ಎ.ಎನ್ ಮುತ್ತು ಅವರು, ‘ಲೇಡಿಸ್ ಬಾರ್’ ಶೀರ್ಷಿಕೆ ಕೇಳಿ ಇದು ಕುಡಿತದ ಬಗ್ಗೆ ಸಿನಿಮಾ ಅಂದುಕೊಳ್ಳಬಹುದು. ಆದರೆ ನಮ್ಮ ಚಿತ್ರದಲ್ಲಿ ಬರೀ ಕುಡಿತವಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡಿದಾಗ ಅದು ತಿಳಿಯುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆಂದು ತಿಳಿಸಿದರು.
ನಾನು ಉದ್ಯಮಿ ಜೊತೆಗೆ ರೈತ ಕೂಡ ಎಂದು ಮಾತನಾಡಿದ ಟಿ.ಎಂ.ಸೋಮರಾಜು, ಸಿನಿಮಾ ರಂಗ ಪರಿಚಯವೇ ಇಲ್ಲ. ನನ್ನ ಗೆಳೆಯ ರಾಜಶೇಖರ್ ನನ್ನನ್ನು ಈ ರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ನಿರ್ದೇಶಕ ಎ.ಎನ್ ಮುತ್ತು ಅವರು ಹೇಳಿದ ಕಥೆ ಇಷ್ಟವಾಯಿತು ನಿರ್ಮಾಣ ಮಾಡಿದ್ದೇನೆ. ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡಿ ಎಂದರು.
ಗಣೇಶ್ ರಾವ್ ಮತ್ತು ಆರಾಧ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಹರೀಶ್ ಅವರ ಸಂಗೀತ, ವೀಣಾ ಮೂರ್ತಿ ಅವರ ಛಾಯಾಗ್ರಹಣ ಮತ್ತು ಜಗ್ಗು ಮಾಸ್ಟರ್ ಅವರ ಸಂಭಾಷಣೆ ಇದೆ.