ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು, ರಾಜಕೀಯ ಕ್ಷೇತ್ರದ ಮುಖಂಡರು ಕಂಬಿನಿ ಮಿಡಿಯುತ್ತಿದ್ದಾರೆ. ಇವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಹಿರಿಯ ನಟಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕನ್ನಡದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಲೀಲಾವತಿ ನಿಧನಕ್ಕೆ ಕಂಬನಿ ಮಿಡಿದಿದ್ದು, ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ. ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನಿಜವಾದ ಐಕಾನ್, ಅವರು ಹಲವಾರು ಚಲನಚಿತ್ರಗಳಲ್ಲಿ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದರು. ಅವರ ವೈವಿಧ್ಯಮಯ ಪಾತ್ರಗಳು ಹಾಗೂ ಕಲಾ ಪ್ರತಿಭೆ ಸ್ಮರಣಾರ್ಹ ಮತ್ತು ಪ್ರಶಂಸನೀಯ. ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ; ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ
ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲೀಲಾವತಿ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.